

ಮೈಸೂರು: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ನೇತೃತ್ವದಲ್ಲಿ ಎರಡು ದಿನ ಆಯೋಜಿಸಿರುವ ‘ಎಜುಕೇಷನ್ ಎಕ್ಸ್‌ಪೋ-2025’ ಮೇಳಕ್ಕೆ ಶನಿವಾರ ಶುಭಾರಂಭಗೊಂಡಿತು.
ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಮೇಳಕ್ಕೆ ಮೊದಲ ದಿನವೇ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಇದರಿಂದ ಮೇಳವು ಕಳೆಗಟ್ಟಿತ್ತು. ಇಂದು ಸಹ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ತೆರೆದಿರುವ ಮೇಳಕ್ಕೆ ಭೇಟಿ ನೀಡಬಹುದಾಗಿದ್ದು, ಪ್ರವೇಶ ಉಚಿತವಾಗಿದೆ.
ಈ ಶೈಕ್ಷಣಿಕ ಮೇಳಕ್ಕೆ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮುಖ್ಯ ಪ್ರಾಯೋಜಕತ್ವ ನೀಡಿದ್ದು, ದಾವಣಗೆರೆಯ ಎಂವಿ ಪದವಿ ಪೂರ್ವ ಕಾಲೇಜು ಮತ್ತು ಬೆಂಗಳೂರಿನ ಸಪ್ತಗಿರಿ ಎನ್‌ಪಿಸಿ ವಿಶ್ವವಿದ್ಯಾಲಯ ಸಹ ಪ್ರಾಯೋಜಕರಾಗಿದ್ದಾರೆ.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್.ಬಸವನಗೌಡಪ್ಪ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ವಿಆರ್‌ಎಲ್ ಮಿಡಿಯಾ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕರಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಉತ್ಸಾಹದಿಂದಲೇ ಶುರುವಾದ ಶಿಕ್ಷಣ ಉತ್ಸವಕ್ಕೆ ಸಾರ್ವಜನಿಕರು ಒಬ್ಬೊಬ್ಬರಾಗಿ ಭೇಟಿ ನೀಡಿದರು. ಕೆಲವರು ಸ್ನೇಹಿತರೊಂದಿಗೆ ಬಂದರೆ, ಕೆಲವರು ಪಾಲಕರೊಂದಿಗೆ ಬಂದರು. ಇನ್ನೂ ಕೆಲವರು ಗುಂಪು ಗುಂಪಾಗಿ ದೌಡಾಯಿಸಿದರು.
ನಗರದ ಜೆಎಸ್‌ಎಸ್, ಮಹಾರಾಣಿ, ಯುವರಾಜ, ಮರಿಮಲ್ಲಪ್ಪ, ಸದ್ವಿದ್ಯಾ, ಕಾವೇರಿ, ವಿಜಯವಿಠಲ ಸೇರಿದಂತೆ ವಿವಿಧ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದರು. ಮೈಸೂರು ನಗರವಷ್ಟೇ ಅಲ್ಲದೆ, ಜಿಲ್ಲೆಯ ಗ್ರಾಮಾಂತರ ಪ್ರದೇಶದಿಂದಲೂ ಮಕ್ಕಳು ಅನೇಕ ಪ್ರಶ್ನೆಗಳನ್ನು ಹೊತ್ತುಕೊಂಡು ಬಂದು ಇಲ್ಲಿ ಉತ್ತರ ಪಡೆದುಕೊಂಡರು.
ಮೇಳದಲ್ಲಿ ದೊರೆತ ಉಪಯುಕ್ತ ಶೈಕ್ಷಣಿಕ ಮಾಹಿತಿ ಪಡೆದ ವಿದ್ಯಾರ್ಥಿಗಳು, ಪಾಲಕರು ಸಂತಸಗೊಂಡರು. ಅಲ್ಲದೆ, ಇಲ್ಲಿ ದೊರೆತ ಜ್ಞಾನದೀವಿಗೆಯಿಂದ ಶೈಕ್ಷಣಿಕ ಭವಿಷ್ಯದ ಕುರಿತು ಸ್ಪಷ್ಟಚಿತ್ರಣವನ್ನು ಪಡೆದುಕೊಂಡ ವಿದ್ಯಾರ್ಥಿಗಳು ವಿಶ್ವಾಸದಿಂದ ಬಿಗಿದರು. ತಮ್ಮ ಅಧ್ಯಯನಕ್ಕೆ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಮೇಳ ವಿದ್ಯಾರ್ಥಿಗಳಿಗೆ ನೆರವಾಯಿತು.
ವಿದ್ಯಾರ್ಥಿಗಳು ಯಾವ ಕಾಲೇಜು ಸೇರಬೇಕು? ಯಾವ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಆಯ್ದುಕೊಳ್ಳಬೇಕು? ಯಾವ ಕೋರ್ಸ್ ತೆಗೆದುಕೊಳ್ಳಬೇಕೆಂಬ ವಿದ್ಯಾರ್ಥಿಗಳ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಒದಗಿತು. ದಾಖಲಾತಿ, ಪ್ರವೇಶ ಪ್ರಕ್ರಿಯೆ, ಶುಲ್ಕ, ಮೂಲಸೌಕರ್ಯಗಳ ಕುರಿತು ವಿಚಾರಿಸಿದರು.
ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕೂಡ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದವು. ತಮ್ಮ ಮಳಿಗೆಗೆ ಆತ್ಮೀಯವಾಗಿ ಬರಮಾಡಿಕೊಂಡು ಶೈಕ್ಷಣಿಕ ಮಾಹಿತಿಯನ್ನು ನೀಡಿದವು. ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಅಕ್ಷರ ಸಂಸ್ಕೃತಿ ಕಲಿಸುವ ಈ ಸಂಸ್ಥೆಗಳ ಪ್ರತಿನಿಧಿಗಳು ಹಸನ್ಮುಖಿಯಾಗಿ ಸಂದರ್ಶಕರನ್ನು ಸ್ವಾಗತಿಸಿದರು.
ಶಿಕ್ಷಣ ಮೇಳದಲ್ಲಿ 31 ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು, ವೈದ್ಯಕೀಯ ವಿವಿಗಳು, ಹೋಟೆಲ್ ಮ್ಯಾನೇಜ್‌ಮೆಂಟ್, ಬಾಹ್ಯಾಕಾಶ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಅನಿಮೇಷನ್, ಇಂಜಿನಿಯರಿಂಗ್, ಬ್ಯಾಂಕಿಂಗ್ ಎಜುಕೇಷನ್, ಸ್ಪೋರ್ಟ್ಸ್ ಎಜುಕೇಷನ್, ಸಮೂಹ ಸಂವಹನ, ಐಟಿಐ ಕಾಲೇಜು,
ಪಾಲಿಟೆಕ್ನಿಕ್, ಡಿಪ್ಲೊಮಾ, ಫ್ಯಾಷನ್ ಡಿಸೈನ್, ಆರ್ಕಿಟೆಕ್ಚರ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಬ್ಯಾಂಕ್‌ಗಳು, ಚಾರ್ಟರ್ಡ್ ಅಕೌಂಟೆನ್ಸಿ, ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಇತರ ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿವೆ. ಸರ್ವರಿಗೂ ಉಚಿತ ಪ್ರವೇಶವಿದ್ದು, ಸಾರ್ವಜನಿಕರು, ಪಾಲಕರು, ವಿದ್ಯಾರ್ಥಿಗಳು ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.