ಮೈಸೂರಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

19
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಯಿತು.

ವಾರದಿಂದ ಸುರಿಯುತ್ತಿರುವ ಮಳೆ ಮತ್ತು ಅಗತ್ಯ ವಸ್ತುಗಳ ಬೆಲೆ ಬಿಸಿಯ ನಡುವೆಯೂ ಹಬ್ಬದ ಸಡಗರ ಮನೆ-ಮನದಲ್ಲಿ ಮೇಳೈಸಿತ್ತು. ಶ್ರಾವಣ ಮಾಸದ 2ನೇ ಶುಕ್ರವಾರ ಆಚರಿಸಲ್ಪಡುವ ಈ ಹಬ್ಬವನ್ನು ಮಹಿಳೆಯರು ವಿಶೇಷವಾಗಿ ಆಚರಿಸಿದರು. ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನೆರವೇರಿದವು.

ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ನಂಬಲಾಗಿರುವ ಈ ಹಬ್ಬವನ್ನು ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ. ಕೋವಿಡ್ ಸಂಕ್ರಮಣದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಹಬ್ಬದ ಸಡಗರ ಈ ಸಲ ಇಮ್ಮಡಿಯಾಗಿತ್ತು. ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಂಡಿದ್ದ ನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಶಕ್ತ್ಯಾನುಸಾರು ಆಚರಣೆ ಮಾಡಿ ಲಕ್ಷ್ಮೀಯನ್ನು ಮನೆಗೆ ಬರಮಾಡಿಕೊಂಡರು.

ಹೆಂಗಳೆಯರು ಮನೆಯನ್ನು ಸ್ವಚ್ಛಗೊಳಿಸಿ ದೇವರ ಮನೆ ಅಥವಾ ಮನೆಯ ಆವರಣದಲ್ಲಿ ಅಷ್ಟಲಕ್ಷ್ಮೀಯರನ್ನು ಪೂಜಿಸಿ ಸುಖ, ಶಾಂತಿ, ನೆಮ್ಮದಿ, ಧನ ಸಂಪತ್ತಿಗಾಗಿ ಪ್ರಾರ್ಥಿಸಿದರು. ಮನೆಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಲಕ್ಷ್ಮೀಯ ಮುಖವಾಡ, ಸೀರೆ, ಬಳೆ ತೊಡಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ವಿವಿಧ ತಿನಿಸುಗಳು, ಹಣ್ಣುಗಳನ್ನು ನೈವೇದ್ಯಕ್ಕಿಟ್ಟು, ಮನೆಯಲ್ಲಿರುವ ಹಣ, ಚಿನ್ನದೊಡವೆಗಳನ್ನು ದೇವರ ಮುಂದಿಟ್ಟು ತಮ್ಮ ಮನೆಯಲ್ಲಿ ಸದಾ ನೆಲೆಸಿರುವಂತೆ ಆರಾಧಿಸಿದರು.
ನಂತರ ತಮ್ಮ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಅರಿಶಿನ, ಕುಂಕುಮ, ಫಲತಾಂಬೂಲ ನೀಡಿದರು. ಇಂತಹ ದೃಶ್ಯ ನಗರದ ಎಲ್ಲೆಡೆ ಸಾಮಾನ್ಯವಾಗಿತ್ತು. ಕೆಲವರು ಸರಳವಾಗಿ ಆಚರಿಸಿದರೆ, ಇನ್ನೂ ಕೆಲವರು ಅದ್ದೂರಿಯಾಗಿ ಆಚರಿಸಿದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:
ವರಮಹಾಲಕ್ಷ್ಮೀ ಹಬ್ಬವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು. ಮಹಿಳೆಯರು ಮನೆಯಲ್ಲಿ ವ್ರತ ಆಚರಣೆ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ದಿವಾನ್ಸ್ ರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಲ್ಲದೆ, ದಟ್ಟಗಳ್ಳಿಯ ನೇತಾಜಿ ಸರ್ಕಲ್‌ನಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲೂ ವಿಶೇಷವಾಗಿ ಅಲಂಕಾರ ಮಾಡಿ ಪೂಜಾಕಾರ್ಯ ಮಾಡಲಾಯಿತು.

ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ 100ಕ್ಕೂ ಹೆಚ್ಚು ಮಹಿಳಾ ಭಕ್ತಾದಿಗಳಿಗೆ ಅಷ್ಟೋತ್ತರ ಪುಸ್ತಕ, ಅರಿಶಿನ ಕುಂಕುಮ ಮತ್ತು ಬಳೆೆ ನೀಡಲಾಯಿತು.
ಈ ವೇಳೆ ಮಾತನಾಡಿದ ಅರ್ಚಕರ ಸಂಘದ ಅಧ್ಯಕ್ಷ ಹಾಗೂ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಕೃಷ್ಣಮೂರ್ತಿ, ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲು ಇಂತಹ ವಿಭಿನ್ನ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಲ್ಲದೆ, ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು.
ವರಮಹಾಲಕ್ಷ್ಮೀ ದೇವಿ ಎಲ್ಲ ದಾರಿದ್ರ್ಯ ನೀಗುವ ದೇವರಾಗಿದ್ದು ಎಲ್ಲರ ಮನಸ್ಸಿನ ಮತ್ತು ಬಡತನದ ದಾರಿದ್ರ್ಯ ನೀಗಿಸಲಿ. ಎಲ್ಲರ ಬಾಳಿನಲ್ಲಿ ದೇವಿ ಬಂದು ಆಶೀರ್ವದಿಸಲಿ. ಇಂತಹ ಧಾರ್ಮಿಕ ಹಬ್ಬಗಳನ್ನು ಸಮಾಜದ ಜತೆಗೆ ಬೆರೆತು ನಡೆಸಲು ಎಲ್ಲ ಭಕ್ತಾದಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಅರಿಶಿನ, ಕುಂಕುಮ ವಿತರಣೆ:
ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ದೇವಸ್ಥಾನಕ್ಕೆ ಆಗಮಿಸಿದ ಮಹಿಳಾ ಭಕ್ತರಿಗೆ ಅರಿಶಿನ, ಕುಂಕುಮ, ಬಳೆ ವಿತರಿಸಲಾಯಿತು. ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಇದೇ ಮೊದಲ ಬಾರಿಗೆ ಅರಿಶಿನ, ಕುಂಕುಮ, ಬಳೆಯನ್ನು ಪ್ರಸಾದದ ರೂಪದಲ್ಲಿ ನೀಡಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದಂಡು ಹೆಚ್ಚಿತ್ತು. ಅಧಿದೇವತೆಗೆ ಮಹಾಲಕ್ಷ್ಮೀ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ತಾಯಿಯ ದರ್ಶನಕ್ಕೆ ಭಕ್ತರು ಆಗಮಿಸಿದರು. ಸರತಿಯ ಸಾಲಿನಲ್ಲಿಯೇ ನಿಂತು ಭಕ್ತರು ತಾಯಿಯ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net