ಮೈಸೂರಿನಲ್ಲಿ ರಸ್ತೆ ಹೆಸರಿಡಲು ಪಾಲಿಕೆ ಸದಸ್ಯರ ಜಟಾಪಟಿ

A 12
Published on

ಮೈಸೂರು: ನಗರದ ಎನ್‌ಐಇ ಕಾಲೇಜು ವಿದ್ಯಾರ್ಥಿನಿಲಯದಿಂದ ಇಸ್ಕಾನ್, ಕಾಂಪ್ಲೆಕ್ಸ್ ಮಾರ್ಗವಾಗಿ ರಾಮಕೃಷ್ಣನಗರ ವೃತ್ತ (ಅಂದೋಲನಾ ವೃತ್ತ)ದ ವರೆಗೆ ಹೆಸರಿಡುವ ವಿಷಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಸದಸ್ಯ ನಡುವೆ ಮಾತಿನ ಜಟಾಪಟಿ, ಧರಣಿ, ಗದ್ದಲ ನಡೆಯಿತು.
ಎನ್‌ಐಇ ಕಾಲೇಜು ಹಾಸ್ಟೆಲ್‌ಪಕ್ಕದ ಅಶೋಕಪುರಂ ರಸ್ತೆಯಿಂದ ಇಸ್ಕಾನ್ ದೇವಸ್ಥಾನದ ಎದುರಿನ ಮೂಲಕ ರಾಮಕೃಷ್ಣನಗರ ವೃತ್ತದ ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆ ರಾಮ್‌ಜೀ ಸಕ್ಪಾಲ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಜನಪರ ವೇದಿಕೆ ಅಧ್ಯಕ್ಷ ಎಸ್.ಶಿವಪ್ಪ ಅವರು ನೀಡಿದ್ದ ಮನವಿಯನ್ನು ಕೌನ್ಸಿಲ್‌ನಲ್ಲಿ ವಿಷಯ ಮಂಡಿಸಲಾಯಿತು.
ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಉದ್ದೇಶಿತ ರಸ್ತೆಗೆ ‘ಉದಯರವಿ’ ರಸ್ತೆ ಎಂದು ಹೆಸರು ಇದೆ. ಈಗ ಹೆಸರನ್ನು ಬದಲಾಯಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಇದಕ್ಕೆ ಕಾಂಗ್ರೆಸ್ ಸದಸ್ಯರು, ಅಶೋಕಪುರಂ ಸದಸ್ಯೆ ಪಲ್ಲವಿ ಬೇಗಂ ವಿರೋಧ ವ್ಯಕ್ತಪಡಿಸಿ, ಉದಯರವಿ ಎನ್ನುವ ಹೆಸರು ನಗರಪಾಲಿಕೆಯಿಂದ ನಾಮಕರಣ ಮಾಡಿಲ್ಲ. ಹಾಗಾಗಿ ಸಂವಿಧಾನ ಶಿಲ್ಪಿಯನ್ನು ರೂಪಿಸಿದ ರಾಮ್‌ಜೀ ಸಕ್ಪಾಲ್ ಹೆಸರಿಡುವುದು ಸೂಕ್ತ ಎಂದು ಪಟ್ಟು ಹಿಡಿದರು.
ಬೇರೆ ರಸ್ತೆಗೆ ಹೆಸರು ಇಟ್ಟು ಅವರಿಗೂ ಗೌರವ ಸಲ್ಲಿಸೋಣ. ಆದರೆ, ಈಗಾಗಲೇ ಕುವೆಂಪು ಅವರ ಕಲ್ಪನೆಯಲ್ಲಿ ಕುವೆಂಪುನಗರದ ರಸ್ತೆಗಳಿಗೆ ಹೆಸರು ಇಡಲಾಗಿದೆ. ಆದ್ದರಿಂದ, ಉದಯರವಿ ಹೆಸರನ್ನು ಹಾಗೆಯೇ ಉಳಿಸಿಕೊಳ್ಳೋಣ ಎಂದು ಮಾಜಿ ಮೇಯರ್ ಸುನಂದಾಪಾಲನೇತ್ರ, ಎಂ.ಸಿ.ರಮೇಶ್, ಮ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಸುಬ್ಬಯ್ಯ, ಜೆಡಿಎಸ್‌ನ ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ಎಸ್‌ಬಿಎಂ ಮಂಜು, ಕೆ.ವಿ.ಶ್ರೀಧರ್ ಸೇರಿದಂತೆ ಇನ್ನಿತರ ಸದಸ್ಯರು ಒತ್ತಾಯಿಸಿದರು.
ಇದರಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು, ಅಧಿಕೃತ ಹೆಸರು ಇಲ್ಲದಿರುವುದರಿಂದ ಹೆಸರು ಘೋಷಿಸಬೇಕು. ಬಿಜೆಪಿ, ಜೆಡಿಎಸ್ ಸದಸ್ಯರು ಅಂಬೇಡ್ಕರ್‌ಗೆ ಅಪಮಾನ ಮಾಡುತ್ತಿದ್ದಾರೆ ಎಂದು ಘೋಷಣೆ ಕೂಗಿದರು.
ಇದಕ್ಕೆ ಪ್ರತಿಯಾಗಿ ಜೆಡಿಎಸ್, ಬಿಜೆಪಿ ಸದಸ್ಯರು, ಕಾಂಗ್ರೆಸ್‌ನವರು ಕುವೆಂಪು ವಿರೋಧಿಗಳು ಎಂದು ಘೋಷಣೆ ಕೂಗಿದರು. ಬಳಿಕ ಕಾಂಗ್ರೆಸ್ ಸದಸ್ಯರು, ಮೇಯರ್ ವೇದಿಕೆ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರಿಂದ ಗಲಭೆ, ಗದ್ದಲ ಉಂಟಾಗಿ ಸಭೆಯನ್ನು 15 ನಿಮಿಷ ಮುಂದೂಡಲಾಯಿತು. ಬಳಿಕ ಸಭೆ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ್ದರಿಂದ ಸಭೆ ಮುಂದೂಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net