

ಮೈಸೂರು: ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಯುವಜನ ಮಹೋತ್ಸವವನ್ನು ಆ.11ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದು, 25 ಸಾವಿರ ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ.
‘ಇದು ಸ್ವಾತಂತ್ರೃ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಸಾಂಸ್ಕೃತಿಕ ಕಾರ್ಯಕ್ರಮ. ಜತೆಗೆ, ಮೈವಿವಿ ಇಂಜಿನಿಯರಿಂಗ್ ಕಾಲೇಜು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯೂ ನೆರವೇರಲಿದೆ’ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಸಂಸದರು, ಶಾಸಕರು ಮತ್ತು ನಾಯಕ ನಟ ಯಶ್ ಕೂಡ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1.15ರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
25 ಸಾವಿರ ವಿದ್ಯಾರ್ಥಿಗಳನ್ನು ಸೇರಿಸಲಾಗುವುದು. ಅದಕ್ಕಾಗಿ ಕಾಲೇಜುಗಳ ಪ್ರಾಂಶುಪಾಲರಿಗೆ, ವಿವಿ ಅಧ್ಯಯನ ವಿಭಾಗಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಬೃಹತ್ ಸಭಾವೇದಿಕೆ ನಿರ್ಮಾಣವಾಗುತ್ತಿದೆ. ಬುಧವಾರದ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದರು.
ಯಾವುದು ಉದ್ಘಾಟನೆ:
ಮಾನಸಗಂಗೋತ್ರಿಗೆ ಭೇಟಿ ನೀಡಲಿರುವ ಸಿಎಂ ಅವರು ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್‌ಗಳು ಮತ್ತು ಹಾಸ್ಟೆಲ್ ಅನ್ನು ಭೌತಿಕವಾಗಿ ಉದ್ಘಾಟಿಸವರು. ಬಳಿಕ ಸಭಾವೇದಿಕೆಯಲ್ಲೂ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವರು. ಈ ಪೈಕಿ ಮೈವಿವಿ ಔಷಧೀಯ ಕಾಲೇಜು ಕಟ್ಟಡ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ನವೀಕೃತ ಸಭಾಂಗಣ, ಬಸವೇಶ್ವರ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಕಟ್ಟಡ, ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಮಿಥಿಕ್ಸ್ ಸೊಸೈಟಿ ಕಾರ್ಯಕ್ರಮ, ಗ್ರಹನಿಧಿ ಕೃತಿ ಬಿಡುಗಡೆ, ವಿಶ್ವಕೋಶ 8 ಮತ್ತು 9ನೇ ಸಂಪುಟ ಅನಾವರಣ, ಸೆಂಟರ್ ಆಫ್ ಎಕ್ಸಲೆನ್ಸ್- ಸ್ಯಾಪ್, ಐಬಿಎಂ ಮತ್ತು ಇಸ್ರಿ(ವೃತ್ತಿ ಆಧಾರಿತ ಮತ್ತು ಕೌಶಲ ಅಭಿವೃದ್ಧಿ ಕೋರ್ಸ್‌ಗಳು) ಬಿಡುಗಡೆಗೊಳಿಸುವರು ಎಂದು ಮಾಹಿತಿ ನೀಡಿದರು.
ಔಷಧ ಕಾಲೇಜು ಆರಂಭ:
ಪ್ರಸಕ್ತ ಸಾಲಿನಲ್ಲಿ ಔಷಧ ಕಾಲೇಜು ಶುರುವಾಗಲಿದೆ. ಈಗಾಗಲೇ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆಯಲಿದ್ದು, ಪ್ರವೇಶಾತಿ ಮುಗಿದ ಬಳಿಕ ನವೆಂಬರ್‌ನಲ್ಲಿ ಬಿ.ಫಾರ್ಮ್ ಕೋರ್ಸ್ ಆರಂಭವಾಗಲಿದೆ. ಮುಂದಿನ ವರ್ಷದಿಂದ ಎಂ.ಫಾರ್ಮ್ ಕೋರ್ಸ್ ನಡೆಸಲಾಗುವುದು ಎಂದರು.
ಶೇ.50ರಷ್ಟು ಬೋಧಕರ ಕೊರತೆ:ಮೈವಿವಿ ಬೋಧಕರ ಕೊರತೆ ತೀವ್ರವಾಗಿದೆ. 664 ಪೈಕಿ 282 ಬೋಧಕರು ಮಾತ್ರ ಉಳಿದಿದ್ದು, ಇವರ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಕಡಿಮೆಯಾಗಿದೆ. ಹೀಗಾಗಿ, ನೇಮಕಾತಿಗಾಗಿ ಎರಡು ತಿಂಗಳಿಗೆ ಒಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುಮತಿ ದೊರೆಯುತ್ತಿಲ್ಲ. ಹೀಗೆ ಹೋದರೆ ವಿವಿ ಹೇಗೆ ನಡೆಸಬೇಕು? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಂಚಣಿ ಹಣ ದುರ್ಬಳಕೆ ಆಗಿಲ್ಲ:
ಮೈಸೂರು ವಿಶ್ವವಿದ್ಯಾಲಯದ ಪಿಂಚಣಿ ಹಣ(ಆಪತ್ತು ನಿಧಿ) ದುರ್ಬಳಕೆ ಆಗಿಲ್ಲ. ಈ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರು ಆರೋಪ ಮಾಡುತ್ತಿದ್ದಾರೆ ಎಂದು ಪ್ರೊ.ಹೇಮಂತ್‌ಕುಮಾರ್ ಹೇಳಿದರು.
ಕರೊನಾದಿಂದ ಶೇ.30ರಷ್ಟು ಅನುದಾನ ಕಡಿತವಾಗಿದೆ. 2021ನೇ ಸಾಲಿನಲ್ಲಿ 92 ಕೋಟಿ ರೂಪಾಯಿಯಲ್ಲಿ 44 ಕೋಟಿ ರೂ. ರಾಜ್ಯ ಸರ್ಕಾರ ನೀಡಿದೆ. ಪ್ರಸಕ್ತ ಸಾಲಿನಲ್ಲಿ 106 ಕೋಟಿ ರೂ. ಪೈಕಿ 50 ಕೋಟಿ ರೂ. ಮಾತ್ರ ನೀಡಿದ್ದು, 53 ಕೋಟಿ ರೂ. ಕೊಟ್ಟಿಲ್ಲ. ಈ ಕೊರತೆಯನ್ನೂ ತುಂಬಿಕೊಳ್ಳಲು ಆಪತ್ತು ನಿಧಿಯ ಹಣವನ್ನು ಬಳಸಿಕೊಂಡು, ಮತ್ತೆ ಅದಕ್ಕೆ ಮರುಪಾವತಿ ಮಾಡಲಾಗಿದೆ. ನಿವೃತ್ತ ಸೌಲಭ್ಯವನ್ನು ಸಕಾಲಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.
10 ಬೋಧಕರು, 26 ಬೋಧಕೇತರರು ಸೇರಿದಂತೆ 36 ನಿವೃತ್ತರು ದಾಖಲೆ ನೀಡಿಲ್ಲ. ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಹೀಗಾಗಿ, ಇವರ ನಿವೃತ್ತ ಸೌಲಭ್ಯ ಮಾತ್ರ ಬಾಕಿ ಉಳಿದೆ. ಈ ಎಲ್ಲ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ಆರೋಪ ಮಾಡಲಾಗುತ್ತಿದೆ. ಎಲ್ಲ ಪ್ರಕ್ರಿಯೆಗಳು ಪಾರದರ್ಶಕತೆಯಿಂದ ನಡೆದಿವೆ ಎಂದರು.
ಕುಲಸಚಿವ ಆರ್.ಶಿವಪ್ಪ ಮಾತನಾಡಿ, ಈ ವಿಷಯದ ಕುರಿತು ಕೆಲವರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಮತ್ತು ಚರ್ಚೆ ಮಾಡಲು ನಾವು ಸಿದ್ಧವಾಗಿದ್ದು, ಯಾರೂ ನಮ್ಮ ಹತ್ತಿರ ಮಾತುಕತೆ ನಡೆಸಲು ಬರುತ್ತಿಲ್ಲ. ಬದಲಿಗೆ ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.