ಮೈಸೂರಿನಲ್ಲಿ ಮೂವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

Arrest Kaidhi
Published on

 ಮೈಸೂರು: ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಗುರುವಾರ ಕಾರ್ಯಾಚರಣೆ ನಡೆಸಿದ ಮೈಸೂರು ನಗರ ಪೊಲೀಸರು ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 5 ಗ್ರಾಂ ಎಂಡಿಎಂಎ ಮತ್ತು 967 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. 23 ಜನ ಮಾದಕ ವ್ಯಸನಿಗಳ ವಿರುದ್ಧ ಪ್ರಕರಣ ದಾಖಲಿಸಿ, 123 ಜನ ಶಂಕಿತರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ನಗರದ ಬಹುತೇಕ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 7ರಿಂದ 12ರವರೆಗೆ ಸಾರ್ವಜನಿಕ ಸ್ಥಳಗಳಾದ ಉದ್ಯಾನ, ಆಟದ ಮೈದಾನ, ಹೋಟೆಲ್, ಹಾಸ್ಟೆಲ್, ಲಾಡ್ಜ್‌ಗಳಿಗೆ ದಿಢೀರ್ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಜತೆಗೆ, ಮಾದಕ ವಸ್ತು ಮಾರಾಟದಲ್ಲಿ ಬಂಧಿತರಾಗಿದ್ದ ಈ ಹಿಂದಿನ 13 ಹಳೆಯ ಅಪರಾಧಿಗಳ ಮನೆ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ಮಾಡಲಾಯಿತು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಶೋಧ ಕಾರ್ಯದಲ್ಲಿ ಡಿಸಿಪಿಗಳಾದ ಬಿಂದುಮಣಿ, ಸುಂದರ್‌ರಾಜ್ ಸೇರಿದಂತೆ ಎಲ್ಲ ಎಸಿಪಿಗಳು ಮತ್ತು ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿನಗರ ಗ್ಯಾರೇಜ್‌ನಲ್ಲಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ಮುಂಬೈ ಪೊಲೀಸರು ಮೈಸೂರು ನಗರ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದರು. ಈ ಸ್ಥಳದ ಮಾಲೀಕರ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net