

ಜೇವರ್ಗಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ನಿಮಿತ್ತ ಆಯೋಜಿಸಿದ್ದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿಯಿAದ ಪ್ರದರ್ಶಿಸಿದ ಸೊನ್ನದ ಅರಿವು ಕೇಂದ್ರ (ಗ್ರಂಥಾಲಯ) ಮಾದರಿ ನೋಡುಗರ ಗಮನ ಸೆಳೆಯಿತು. ಸೊನ್ನ ಅರಿವು ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದು, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಓದುಗರಿಗೆ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಸಂಗ್ರಹಿಸಿದೆ. ಜಿಲ್ಲೆಯಲ್ಲಿ ಉತ್ತಮ ಗ್ರಂಥಾಲಯ ಎಂದು ಹೆಸರು ಪಡೆದಿದೆ. ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಸೊನ್ನದ ಅರಿವು ಕೇಂದ್ರದ ಮಾದರಿಗೆ ಅವಕಾಶ ನೀಡಿದ್ದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾಪಂ ಇಒ ರೇವಣಸಿದ್ದಪ್ಪ ಗೌಡರ, ಅರಿವು ಕೇಂದ್ರ ಮೇಲ್ವಿಚಾರಕ ಮಲ್ಲಿಕಾರ್ಜುನ ಬಿರಾದಾರ, ಗ್ರಾಪಂ ಪಿಡಿಒ ಸಲೀಂ ಪಟೇಲ್, ಸಿಬ್ಬಂದಿ ಹಾಗೂ ಗ್ರಾಮಸ್ಥರು ಖುಷಿ ವ್ಯಕ್ತಪಡಿಸಿದ್ದಾರೆ.