ಮೈಸೂರಿನಲ್ಲಿ ಮನೆ ಮನೆ ದಸರಾ

12
Published on

ಮೈಸೂರು: ದಸರೆಗೆ ಮುನ್ನ ರಸ್ತೆ ಗುಂಡಿ ಮುಚ್ಚುವ ಕೆಲಸ, ಮನೆ ಮನೆ ದಸರಾಕ್ಕಾಗಿ ಪ್ರತಿ ವಾರ್ಡ್‌ಗೆ 2 ಲಕ್ಷ ರೂ. ಅನುದಾನ, ಎಲ್ಲ ಸದಸ್ಯರಿಗೆ ದಸರಾ ಗೋಲ್ಡ್ ಕಾರ್ಡ್, ರಾಜಬೀದಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು..!

ದಸರಾ ಸಂಬಂಧ ಸೋಮವಾರ ಜರುಗಿದ ಪಾಲಿಕೆ ವಿಶೇಷ ಸಾಮಾನ್ಯ ಸಭೆಯ ಪ್ರಮುಖ ನಿರ್ಣಯಗಳು ಇವು.

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೊದಲ ಸಾಮಾನ್ಯ ಸಭೆ ನಡೆಸಿದ ಮೇಯರ್ ಶಿವಕುಮಾರ್, ದಸರಾ ಕುರಿತು ಸದಸ್ಯರ ಸಲಹೆ-ಸೂಚನೆಯನ್ನು ಆಲಿಸಿದರು. ನಾಲ್ಕು ತಾಸು ನಡೆದ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಕ್ರೂಢೀಕರಣ ಮಾಡಿ ಸಭೆಯ ನಿರ್ಣಯವನ್ನು ಮೇಯರ್ ಪ್ರಕಟಿಸಿದರು.
ಶಾಸಕರು ಮತ್ತು ಮೇಯರ್ ಅನುದಾನದಲ್ಲಿ ಈಗಾಗಲೇ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆದಿದೆ. ಮಳೆಯಿಂದ ತಡವಾಗಿರುವ ಕಾಮಗಾರಿ ಈಗ ಶುರುವಾಗಿದೆ. ಇದರಲ್ಲಿ ಬಿಟ್ಟು ಹೋಗಿರುವ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಗುರುತಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ದಸರಾ ಒಳಗೆ ಈ ಕಾರ್ಯವನ್ನೂ ಪೂರ್ಣಗೊಳಿಸಲಾಗುವುದು ಎಂದು ಮೇಯರ್ ತಿಳಿಸಿದರು.

ಮನೆ ಮನೆ ದಸರಾ ಆಯೋಜನೆಗೆ ಪ್ರತಿ ವಾರ್ಡ್‌ಗೆ 2 ಲಕ್ಷ ರೂ. ನೀಡಲಾಗುವುದು. ಇದು ಕಳೆದ ಎರಡ್ಮೂರು ವರ್ಷ ನಡೆದಿಲ್ಲ. ಈ ಸಲ ಆಯೋಜಿಸೋಣ ಎಂದು ತಿಳಿಸಿದರು.

ರಾಜಬೀದಿಯ ಫುಟ್‌ಪಾತ್ ಜಾಗವನ್ನು ಬೀದಿಬದಿಯ ಅಂಗಡಿಗಳು ಆಕ್ರಮಿಸಿಕೊಂಡಿವೆ. ಆದ್ದರಿಂದ ಕೆ.ಆರ್. ವೃತ್ತದಿಂದ ಮಿಲೇನಿಯರ್ ವೃತ್ತದ ವರೆಗೆ ತಕ್ಷಣಕ್ಕೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದರು.

ದಸರಾ ನೋಡಲು ಬರುವ ಪ್ರವಾಸಿಗರ ಅನುಕೂಲಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಶೌಚಗೃಹ ಮತ್ತು ಖಾಸಗಿ ಸಂಸ್ಥೆಗಳ ನೆರವಿನಿಂದ ತಾತ್ಕಾಲಿಕ ಶೌಚಗೃಹದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.


ಜಂಬೂ ಸವಾರಿ ಸೇರಿದಂತೆ ದಸರಾದ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗಾಗಿ ಪಾಲಿಕೆಯ ಪ್ರತಿಯೊಬ್ಬ ಸದಸ್ಯರಿಗೂ ದಸರಾ ಗೋಲ್ಡ್ ಕಾರ್ಡ್ ವಿತರಿಸಲಾಗುವುದು. ಒಂದು ಕಾರ್ಡ್ ಮೂಲಕ ನಾಲ್ವರು ಪ್ರವೇಶಿಸಬಹುದು. ಇದನ್ನು ನೀಡಲು ಪ್ರಬಲವಾಗಿ ಒತ್ತಾಯ ಮಾಡಲಾಗುವುದು. ಜಿಲ್ಲಾಧಿಕಾರಿಯೊಂದಿಗೂ ಚರ್ಚೆ ಮಾಡಲಾಗುವುದು. ಹೋರಾಟ ಮಾಡಿಯಾದರೂ ಪಾಸ್ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸದಸ್ಯರಿಗೆ ಭರವಸೆ ನೀಡಿದರು.

ಪ್ರತಿ ವಾರ್ಡ್‌ನ ಪ್ರಮುಖ ವೃತ್ತದಲ್ಲೂ ದಸರಾ ದೀಪಾಲಂಕಾರ ಮಾಡಲು ಕ್ರಮ ವಹಿಸಲಾಗುವುದು. ರಸ್ತೆ ವಿಭಜಕಗಳು, ಉದ್ಯಾನಗಳಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಕೈಗೆತ್ತಿಕೊಳ್ಳಲಾಗುವುದು. 65 ವಾರ್ಡ್‌ನಲ್ಲೂ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನಾರೋಗ್ಯ ಪೀಡಿತ ಪಾಲಿಕೆ ಸದಸ್ಯೆ ಅಶ್ವಿನಿ ಶರತ್‌ರಿಗೆ ಆರ್ಥಿಕ ನೆರವು ನೀಡಲಾಗುವುದು. ಅದಕ್ಕಾಗಿ ಪಾಲಿಕೆಯಿಂದ ವೈದ್ಯಕೀಯ ವೆಚ್ಚ ಭರಿಸಲಾಗುವುದು. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮಂಡಿಸಿ, ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಕುರಿತು ಎಲ್ಲ ಸದಸ್ಯರು ವಿಷಯ ಪ್ರಸ್ತಾಪಿಸಿದರು. ಜತೆಗೆ, ಎಲ್ಲ ಸದಸ್ಯರಿಗೂ ಆರೋಗ್ಯ ವಿಮೆಯನ್ನು ಪಾಲಿಕೆಯಿಂದ ಮಾಡಿಸಬೇಕು ಎಂದೂ ಆಗ್ರಹಿಸಿದರು

ಮೇಯರ್‌ಗಳಿಗೆ ಆಹ್ವಾನ;

ರಾಜ್ಯದಲ್ಲಿರುವ 8 ಪಾಲಿಕೆಗಳ ಮೇಯರ್‌ಗಳನ್ನು ದಸರಾಗೆ ಆಹ್ವಾನ ನೀಡಿದ್ದು, ಅವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ಗ್ಯಾಸ್ ಪೈಪ್‌ಲೈನ್ ಗಲಾಟೆ:
ಪೈಪ್‌ಲೈನ್ ಮೂಲಕ ಮನೆಮನೆಗೆ ಗೃಹ ಬಳಕೆಯ ನೈಸರ್ಗಿಕ ಅನಿಲ ಪೂರೈಸುವ ಕಾಮಗಾರಿ ಮತ್ತೆ ಗದ್ದಲಕ್ಕೆ ಕಾರಣವಾಯಿತು. ಈ ಕಾಮಗಾರಿ ಕುರಿತು ಚರ್ಚೆ ಮಾಡದೆ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಳೆದ ಸಾಮಾನ್ಯಸಭೆಯಲ್ಲಿ ಏಕಾಏಕಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಆದ್ದರಿಂದ ದಸರಾ ಮುಗಿಯುವ ವರೆಗೆ ಈ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್, ಜೆಡಿಎಸ್ ಕೆಲ ಸದಸ್ಯರು ಆಗ್ರಹಿಸಿದರು. ಆಗ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು. ಕೈ ಸದಸ್ಯ ಒತ್ತಡಕ್ಕೆ ಬಗ್ಗದ ಮೇಯರ್, ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡೋಣ ಎಂದು ವಾಗ್ವಾದಕ್ಕೆ ತೆರೆ ಎಳೆದರು.

ಈ ಸಲ ಪಾಲಿಕೆ ಅನುದಾನವನ್ನೇ ಕೊಟ್ಟಿಲ್ಲ:
ದಸರಾಕ್ಕೆ ಈ ಸಲ ಸರ್ಕಾರದಿಂದ ನೇರವಾಗಿ ಅನುದಾನವೇ ಬಂದಿಲ್ಲ…!
ಈ ವಿಷಯವನ್ನು ಮೇಯರ್ ತಿಳಿಸಿದರು. ಆದರೆ, ಜಿಲ್ಲಾಡಳಿತದ ಮೂಲಕ 3.50 ಕೋಟಿ ರೂ. ಕೆಲ ಕಾಮಗಾರಿಗಳಿಗೆ ಬಂದಿದೆ ಎಂದು ತಿಳಿಸಿದರು. ಆಗ ಕಾಂಗ್ರೆಸ್ ಸದಸ್ಯ ಆಯೂಬ್ ಖಾನ್ ಅವರು ‘ಪಾಲಿಕೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ 5 ಕೋಟಿ ರೂ. ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ 7 ಕೋಟಿ ರೂ. ಸೇರಿದಂತೆ ಪ್ರತಿ ದಸರಾದಲ್ಲೂ ಪಾಲಿಕೆಗೆ ಅನುದಾನ ಬಂದಿದೆ. ಆದರೆ, ಪಾಲಿಕೆ, ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದರೂ ನಮಗೆ ಅನುದಾನ ನೀಡಿಲ್ಲ ಎಂದು ಕಿಡಿಕಾರಿದರು

ಸದಸ್ಯರ ಸಲಹೆ-ಸೂಚನೆಗಳು

  • ಕಳೆದ ಬಾರಿ ಮೇಯರ್ ಅವರನ್ನು ಹಿಂದಿನ ಕುರ್ಚಿಯಲ್ಲಿ ಕುಳಿಸಿ ಅವಮಾನ ಮಾಡಲಾಗಿತ್ತು. ಈ ಸಲ ಈ ತಪ್ಪು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.
  • ಚಾಮರಾಜ ಕ್ಷೇತ್ರಕ್ಕೆ ಮಾತ್ರ ಸಿಎಂ ಅನುದಾನ ಬಂದಿದೆ. ನರಸಿಂಹರಾಜ ಕ್ಷೇತ್ರಕ್ಕೆ ನಯಾಪೈಸ ಹಣಕೊಟ್ಟಿಲ್ಲ. ಇಲ್ಲಿಯ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಬಿದ್ದಿವೆ: ಆಯೂಬ್ ಖಾನ್ ಅಸಮಾಧಾನ
  • ದಸರಾ ಮುಗಿಯುವ ವರೆಗೆ ಅಧಿಕಾರಿಗಳಿಗೆ ರಜೆ ನೀಡಬೇಡಿ.
  • ಪ್ರತಿ ವಾರ್ಡ್‌ನಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು.
  • ನಗರದಲ್ಲಿರುವ ಕೊಪ್ಪಲಗಳಿಗೂ ದೀಪಾಲಂಕಾರ ಮಾಡಬೇಕು.
  • ಸ್ವಚ್ಛತೆ ಒತ್ತು ನೀಡಬೇಕು. ಜತೆಗೆ 15 ದಿನ ಕಾಲ ಪ್ರತಿ ವಾರ್ಡ್‌ಗೆ 5 ಜನ ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸಬೇಕು.
  • ಜಂಬೂ ಸವಾರಿ, ಪಂಜಿನ ಕವಾಯತು ಕಾರ್ಯಕ್ರಮ ವೀಕ್ಷಣೆಗಾಗಿ ಕಾರ್ಪೋರೇಟರ್‌ಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ದಸರಾ ಪ್ರತಿಯೊಂದು ಕಾರ್ಯಕ್ರಮವನ್ನು ಮುಕ್ತವಾಗಿ ನೋಡಲು ಗುರುತಿನ ಚೀಟಿ ಅಥವಾ ಪಾಸ್ ನೀಡಬೇಕು.
  • ಜಂಬ ಸವಾರಿ ಮೆರವಣಿಗೆ ಸಂದರ್ಭದಲ್ಲಿ ಲಕ್ಷ್ಮೀ ಹೆಣ್ಣಾನೆಗೆ ಹೆರಿಗೆ ಆಗಿದ್ದರೆ ಏನು ಪರಿಸ್ಥಿತಿ ಆಗುತ್ತಿತ್ತು? ಈ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕು: ಶೋಭಾ ಸುನಿಲ್ ಆಗ್ರಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net