ಮೈಸೂರಿನಲ್ಲಿ ಮನೆ ಬಾಡಿಗೆಗೆ ದಾಖಲೆ ಪರಿಶೀಲನೆ ಕಡ್ಡಾಯ

Published on

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇನ್ನು ಮುಂದೆ ಮನೆ, ಅಪಾರ್ಟ್‌ಮೆಂಟ್, ರೂಂ, ಪಿಜಿ ಬಾಡಿಗೆಗೆ ನೀಡಲು ಕಡ್ಡಾಯವಾಗಿ ಮೂಲ ದಾಖಲೆ ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟ ಮಾಲೀಕರು ನೇರ ಹೊಣೆ ಆಗಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಎಚ್ಚರಿಸಿದರು.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಆರೋಪಿ ಶಾರೀಕ್ ನಕಲಿ ದಾಖಲೆ ನೀಡಿ ರೂಮ್ ಬಾಡಿಗೆಗೆ ಪಡೆದಿದ್ದ. ಇದರಿಂದ ಆತ ದುಷ್ಕೃತ್ಯ ನಡೆಸಲು ಅನುಕೂಲವಾಗಿತ್ತು. ಹೀಗಾಗಿ ಇದರ ಅಸಲಿತನ ಪರೀಕ್ಷಿಸಲು ಮುಂದಾಗಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾಡಿಗೆ ಮನೆ, ರೂಂಗಳು, ಪಿಜಿಗಳಲ್ಲಿ ಇರುವವರು ತಮ್ಮ ಪೂರ್ವಾಪರ ಮಾಹಿತಿಯನ್ನು ಕಡ್ಡಾಯವಾಗಿ ಒಂದು ತಿಂಗಳೊಳಗೆ ಪೊಲೀಸರಿಗೆ ನೀಡಬೇಕು. ಅಪರಿಚಿತರು ಮತ್ತು ಹೊರಗಿನವರಿಗೆ ಬಾಡಿಗೆ ನೀಡುವ ಮೊದಲು ಅವರ ಹಿನ್ನೆಲೆ ತಿಳಿಯುವ ಜತೆಗೆ ಗುರುತಿನ ಚೀಟಿ, ದಾಖಲೆ ಪಡೆಯುವುದು ಸೂಕ್ತ. ಹಾಗೆಯೇ ಬಾಡಿಗೆದಾರರು ಠಾಣೆಗಳಿಗೆ ಅರ್ಜಿ ಸಲ್ಲಿಸಿ ಪೊಲೀಸರಿಂದ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಈ ಬಗ್ಗೆ ಎಲ್ಲ ಠಾಣೆಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬಡಾವಣೆಯ ಬೀಟ್ ಪೊಲೀಸರು, ನಗರದ ಎಲ್ಲ ಠಾಣೆಗಳಲ್ಲಿ ಸುರಕ್ಷಾ ನಮೂನೆ- 1 ನೀಡಲಾಗುತ್ತದೆ. ಅದನ್ನು ಪಡೆದು ಮಾಹಿತಿ ಭರ್ತಿ ಮಾಡಬೇಕು. ಅರ್ಜಿ ಜತೆಗೆ ಬಾಡಿಗೆ, ಭೋಗ್ಯದಾರರ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ, ಕೆಲಸ ಮಾಡುವ ಸ್ಥಳದಲ್ಲಿ ನೀಡುವ ಗುರುತಿನ ಪತ್ರದ ಜೆರಾಕ್ಸ್ ಅನ್ನು ಲಗತ್ತಿಸಬೇಕು ಎಂದು ಹೇಳಿದರು.
ಬಾಡಿಗೆ, ಭೋಗ್ಯದಾರರು ನೀಡುವ ದಾಖಲೆಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲು ಸಂಬಂಧಪಟ್ಟ ಠಾಣೆಗಳಿಗೆ ನೂರು ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು. ದಾಖಲೆಯನ್ನು ಪರಿಶೀಲಿಸಿ ಒಂದು ವಾರದಲ್ಲಿ ದಾಖಲೆಯ ಸಾಚಾತನ ತಿಳಿಸಲಾಗುವುದು ಎಂದು ತಿಳಿಸಿದರು.
ಮಾಲೀಕರುಗಳು ಮನೆ, ರೂಂಗಳನ್ನು ಬಾಡಿಗೆ ಕೊಡಿಸುವಂತೆ ರಿಯಲ್ ಎಸ್ಟೇಟ್ ಮತ್ತು ಬ್ರೋಕರ್‌ಗಳ ಮೊರೆ ಹೋಗಿದ್ದು, ಮನೆ ತೋರಿಸುವ ಮುನ್ನ ಬಾಡಿಗೆ ಪಡೆಯುವವರ ಎಲ್ಲ್ಲ ಮಾಹಿತಿ ಮತ್ತು ದಾಖಲೆಯನ್ನು ಪರಿಶೀಲಿಸಿದ ಬಳಿಕವಷ್ಟೇ ತಿಳಿಸಬೇಕು. ಅಪರಿಚಿತರಿಗೆ ಮನೆ ಅಥವಾ ರೂಮ್‌ಗಳನ್ನು ನೀಡಿ ಬಳಿಕ ಸಮಸ್ಯೆ ಎದುರಾದಾಗ ಪರದಾಡುವ ಬದಲು, ಮನೆ ಬಾಡಿಗೆ, ಭೋಗ್ಯ ನೀಡುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ನೀಡುವ ನಮೂನೆಗಳನ್ನು ಮತ್ತು ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲಿಸುವರು. ಇದಕ್ಕೆ ನಗರ ಪಾಲಿಕೆ ಅಧಿಕಾರಿಗಳ ಸಹಕಾರವನ್ನು ಕೇಳಿದ್ದೇವೆ. ಮಾಹಿತಿಯನ್ನು ನೀಡದೆ ಉದಾಸೀನ ಮಾಡಿದರೆ, ಮುಂದೆ ಯಾವುದೇ ಅನಾಹುತವಾದರೂ ಅದಕ್ಕೆ ಮಾಲೀಕರು ಮತ್ತು ಪಿಜಿ ನಡೆಸುವವರೇ ಹೊಣೆಯಾಗುತ್ತಾರೆ. ಮುಂದಿನ ದಿನಗಳಲ್ಲಿ ಆಲ್‌ಲೈನ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.
ರೂಂ ನೀಡಿದರೆ ಕ್ರಮ:
ಹೋಟೆಲ್, ಲಾಡ್ಜ್, ಹೋಂಸ್ಟೇಗಳಲ್ಲಿ ಯಾವುದೇ ದಾಖಲೆ ಇಲ್ಲದೆ, ಯಾರಿಗಾದರೂ ರೂಂ ನೀಡುವುದು, ಉಳಿದುಕೊಳ್ಳಲು ಅವಕಾಶ ನೀಡುವಂತಿಲ್ಲ. ಪೊಲೀಸರು ಆಗಾಗ್ಗೆ ಪರಿಶೀಲನೆ ಮಾಡಲಿದ್ದು, ದಾಖಲೆ ಇಲ್ಲದೆ ಯಾರಿಗಾದರೂ ಉಳಿಯಲು ಅವಕಾಶ ನೀಡುವುದು ಕಂಡುಬಂದಲ್ಲಿ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು ಎಚ್ಚರಿಸಿದರು.
ನಗರದ ಮೊಹಲ್ಲಾಗಳಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಲಿದ್ದು, ಸಾರ್ವಜನಿಕರು ಸಮಸ್ಯೆ ತಿಳಿಸಬಹುದು. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರೌಡಿಶೀಟರ್‌ಗಳ ಪರೇಡ್ ಹೆಚ್ಚಿಸಲಾಗುವುದು. ಅವರಿಗೆ ತಿಳಿವಳಿಕೆ ಹೇಳಲಾಗುವುದು. ಕೇಳದೆ ಚಟುವಟಿಕೆ ಮುಂದುವರಿಸಿದರೆ ಗಡಿಪಾರು ಮಾಡಲಾಗುವುದು ಎಂದರು.
ಪ್ರವಾಸಿ ತಾಣವಾಗಿರುವ ನಗರ ಪ್ರವೇಶಿಸುವ 9 ಕಡೆಗಳಲ್ಲಿ ವಾಹನ ತಪಾಸಣೆ ನಡೆಸಲಾಗುವುದು. ಅಲ್ಲದೇ ನಗರದ ಒಳಗೆ 23 ಕಡೆ ವಾಹನಗಳ ಪರಿಶೀಲನೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ಅನುಮಾನಾಸ್ಪದವಾಗಿ ಕಂಡು ಬಂದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಅಂಗಡಿಗಳು ರಾತ್ರಿ 11 ಗಂಟೆಗೆ ಬಂದ್:
ನಗರದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು ರಾತ್ರಿ 11 ಗಂಟೆಗೆ ಬಂದ್ ಅಗಬೇಕು. ತಡರಾತ್ರಿ ವರೆಗೂ ಅನುಮತಿ ಇಲ್ಲದೇ ಅಂಗಡಿಗಳನ್ನು ತೆರೆದಿದ್ದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳಲು ಎಲ್ಲ ಠಾಣೆ ಪೊಲೀಸರಿಗೆ ಸೂಚಿಸಿದ್ದೇನೆ. ವಾಹನ ದಟ್ಟಣೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಯುತ್ತಿದೆ. ಸಾರ್ವಜನಿಕರ ಸಮಸ್ಯೆ ಆಲಿಸಲು ಎಲ್ಲ ಠಾಣೆಗಳಲ್ಲಿ ಎರಡು ಗಂಟೆ ಸಮಯ ಮೀಸಲಿಡುವಂತೆ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net