

ಸದೇಶ್ ಕಾರ್ಮಾಡ್ ಮೈಸೂರು
ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಹಾಗೂ ಸಂಸ್ಕರಣೆಯಾಗಬೇಕು ಎಂಬ ಉದ್ದೇಶದಿಂದ ನಗರ ಪಾಲಿಕೆ ಹೊಸದಾಗಿ ಹೆಬ್ಬಾಳು 2ನೇ ಹಂತದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಿದ್ದು, ಸದ್ಯದಲ್ಲಿಯೇ ಈ ಘಟಕ ಕಾರ್ಯಾರಂಭಗೊಳ್ಳಲಿದೆ.
ಹೆಬ್ಬಾಳು 2ನೇ ಹಂತದ ಘಟಕ ಕಾರ್ಯಾರಂಭ ಮಾಡಿದರೆ ಅಲ್ಲಿ ಸಂಗ್ರಹವಾಗುವ ತ್ಯಾಜ್ಯ ಇನ್ನು ಮುಂದೆ ವಿದ್ಯಾರಣ್ಯಪುರಂನಲ್ಲಿ ರುವ ಸೂಯೇಜ್ ಫಾರ್ಮ್ ಘಟಕ ಸೇರುವುದಿಲ್ಲ. ಬದಲಾಗಿ ವಾರ್ಡ್ ಮಟ್ಟದಲ್ಲಿಯೇ ಹಸಿಕಸ ಹಾಗೂ ಒಣಕಸ ವಿಂಗಡಣೆಯಾಗಿ ನೇರವಾಗಿ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕವನ್ನು ಸೇರಲಿದೆ. ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯವನ್ನು ಗೊಬ್ಬರ ತಯಾರಿಕೆಗೆ ಬಳಕೆ ಮಾಡಲಾಗುವುದು.
ನಗರದಲ್ಲಿ ಇದುವರೆಗೆ ಒಟ್ಟು 9 ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಪೈಕಿ ಎರಡು ಘಟಕ ಗಳು ಕಾರ್ಯನಿರ್ವಹಿಸುತ್ತಿಲ್ಲ. ಕುಂಬಾರಕೊಪ್ಪಲು ಘಟಕ ಕಾರ್ಯಾರಂಭಗೊಂಡರೆ ಸಕ್ರೀಯ ಘಟಕಗಳ ಸಂಖ್ಯೆ 8ಕ್ಕೆ ಏರಿಕೆಯಾಗಲಿದೆ.
ಹೆಬ್ಬಾಳು 2ನೇ ಹಂತದ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಖಾಲಿ ನಿವೇಶನದಲ್ಲಿ ನೂತನ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕವನ್ನು 42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಘಟಕಕ್ಕೆ ಲಕ್ಷ್ಮೀಕಾಂತ ನಗರ ಮತ್ತು ಮಂಚೇಗೌಡನಕೊಪ್ಪಲು ಸೇರಿದಂತೆ ಸುತ್ತಲಿನ ವಾರ್ಡ್‌ಗಳಿಂದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.
ಮೈಸೂರು ಸ್ವಚ್ಛತೆಯಲ್ಲಿ ಪ್ರತಿ ಬಾರಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಾ ಬಂದಿದೆ. ಆದರೆ, ನಗರದಲ್ಲಿ ಪ್ರಸ್ತುತ ತ್ಯಾಜ್ಯ ಸಂಸ್ಕರಣಾ ಘಟಕಗಳ ಕೊರತೆಯಿಂದ ಸೂಯೇಜ್ ಫಾರ್ಮ್ ತ್ಯಾಜ್ಯ ಸಂಸ್ಕರಣಾ ಘಟಕದ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಹೆಬ್ಬಾಳು ಶೂನ್ಯತ್ಯಾಜ್ಯ ನಿರ್ವಹಣಾ ಘಟಕ ಕಾರ್ಯಾರಂಭಗೊಂಡರೆ ಸೂಯೇಜ್ ಫಾರ್ಮ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ಹೊಸದಾಗಿ ಕೆಸರೆ ಮತ್ತು ರಾಯನಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕ ಕಾರ್ಯಾರಂಭಗೊಂಡರೆ ಸ್ವಚ್ಛತೆಯಲ್ಲಿ ಮೈಸೂರು ಸದಾ ಮುಂದಿರಲಿದೆ.
ಸ್ವಚ್ಛತೆಯಲ್ಲಿ ಮೈಸೂರಿನ ಸಾಧನೆ
2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊ ಂಡಿತ್ತು. ನಂತರ ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ನಗರ ಬಾಚಿಕೊಂಡರೂ ಸಮಗ್ರ ವಿಭಾಗದಲ್ಲಿ ಮತ್ತೆ ನಂ. 1 ಸ್ಥಾನಕ್ಕೆ ಮರಳಲು ಸಾಧ್ಯವಾಗಲಿಲ್ಲ. 2017ರಲ್ಲಿ 5ನೇ ಸ್ಥಾನ, 2018ರಲ್ಲಿ 8ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ ಪಡೆದುಕೊಂಡಿತು. 2021ರಲ್ಲಿ ಪ್ರಥಮ ಬಾರಿಗೆ ಟಾಪ್-10 ಸ್ಥಾನದಿಂದ ಹೊರ ಬಿದ್ದು 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 2022ರಲ್ಲಿ ನಗರ 8ನೇ ಸ್ಥಾನ ಪಡೆದುಕೊಂಡು ಮತ್ತೆ ಟಾಪ್-10 ಸ್ಥಾನಕ್ಕೆ ಮರಳಿತು. ಇಷ್ಟು ಮಾತ್ರವಲ್ಲದೆ ಹಲವು ವಿಭಾಗಗಳಲ್ಲಿ ಮೈಸೂರು ನಗರ ಪ್ರತಿ ಬಾರಿ ಒಂದಲ್ಲಾ ಒಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾ ಬರುತ್ತಿದೆ. 2019 ರಿಂದ ನಿರಂತರವಾಗಿ ಫೈವ್‌ಸ್ಟಾರ್ ರೇಟಿಂಗ್ ನೊಂದಿಗೆ ತ್ಯಾಜ್ಯ ಮುಕ್ತ ನಗರಿ, ಬಯಲು ಶೌಚಮುಕ್ತ ನಗರ ಪ್ರಶಸ್ತಿ ನಗರ ಪ್ರಶಸ್ತಿಯನ್ನು ಪಡೆಯುತ್ತಿದೆ.
ಸ್ವಚ್ಛ ಭಾರತ ಅಭಿಯಾನ ಪ್ರಕಾರ ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ಸಂಸ್ಕರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಹೆಬ್ಬಾಳು 2ನೇ ಹಂತದಲ್ಲಿ ಹೊಸದಾಗಿ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲಾಗಿದೆ. ಈ ಘಟಕ ಕಾರ್ಯಾರಂಭಗೊಂಡರೆ ಆ ಭಾಗದ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯ ಸಮಸ್ಯೆ ಬಗೆಹರಿಯಲಿದೆ. ಅಲ್ಲದೆ, ಸೂಯೇಜ್‌ಫಾರ್ಮ್ ಮೇಲಿನ ಒತ್ತಡ ಸಹ ಕಡಿಮೆಯಾಗಲಿದೆ.
ಡಾ.ಜಿ.ನಾಗರಾಜು, ಪಾಲಿಕೆ ಆರೋಗ್ಯಾಕಾರಿ
ಲಕ್ಷ್ಮೀಕಾಂತ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯ ವಿಚಾರದಲ್ಲಿ ದೊಡ್ಡ ಸಮಸ್ಯೆ ಎದುರಾಗಿತ್ತು. ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದಿಂದ ಈ ಭಾಗದ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಯ ಸಮಸ್ಯೆ ಸಂಪೂರ್ಣ ಬಗೆಹರಿಯುವ ವಿಶ್ವಾಸ ಹೊಂದಿದ್ದೇವೆ. ನಮ್ಮ ಭಾಗದಲ್ಲಿ ಬಹುತೇಕ ಜನರು ತ್ಯಾಜ್ಯವನ್ನು ಪಾಲಿಕೆ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡುತ್ತಾರೆ. ಆದರೆ ಕೆಲವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾ ಗುವುದು. ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿ ಸಂಪೂರ್ಣಗೊಂಡಿದ್ದು, ವಿದ್ಯುತ್ ಅಳವಡಿಕೆ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಒಂದೆರಡು ತಿಂಗಳ ಒಳಗೆ ಘಟಕ ಕಾರ್ಯಾರಂಭಗೊಳ್ಳಲಿದೆ.
ಲಕ್ಷ್ಮೀ ಶಿವಣ್ಣ, ಪಾಲಿಕೆ ಸದಸ್ಯೆ