

ಮೈಸೂರು: ಮಕ್ಕಳಲ್ಲಿ ಹರಡುವ ಪೋಲಿಯೋವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಭಾನುವಾರ ಸುಸೂತ್ರವಾಗಿ ನೆರವೇರಿತು. ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಉತ್ಸಾಹದಿಂದ ಲಸಿಕೆ ಹಾಕಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ) ಕಾರ್ಯಕ್ರಮವನ್ನು ಎಲ್ಲೆಡೆ ಯಶಸ್ವಿಯಾಗಿ ಜರುಗಿತು. ಲಸಿಕೆಗಳನ್ನು ಶೀತಲ ಸರಪಳಿಯಲ್ಲಿ ನಿರ್ವಹಿಸಿ, ಅತ್ಯಂತ ಸುರಕ್ಷಿತವಾಗಿ ಮಕ್ಕಳಿಗೆ ಲಸಿಕೆ ನೀಡಲಾಯಿತು.
ಭಾರತದಲ್ಲಿರುವ ಶೇ.18ರಿಂದ 19ರಷ್ಟು ಮಕ್ಕಳಿಗೆ ಪಲ್ಸ್ ಪೋಲಿಯೋವನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಹಾಕುವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಅಂದಾಜು 2,44,067 ಮಕ್ಕಳಿಗೆ ಈ ಲಸಿಕೆ ಹಾಕಲಾಯಿತು. ಅದಕ್ಕಾಗಿ ಜಿಲ್ಲಾದ್ಯಂತ 1,665 ಬೂತ್‌ಗಳನ್ನು ತೆರೆಯಲಾಗಿತ್ತು.
ಬಸ್, ರೈಲು ನಿಲ್ದಾಣಗಳು, ಪ್ರವಾಸಿ ತಾಣಗಳು ಹಾಗೂ ಮಾಲ್‌ಗಳು ಸೇರಿದಂತೆ ಸಂಚಾರಿ ಘಟಕಗಳು ಸಹ ಕೆಲಸ ನಿರ್ವಹಿಸಿದವು. ಜಿಲ್ಲೆಯಲ್ಲಿ ಲಸಿಕಾ ಕಾರ್ಯಕರ್ತರು, ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಿದರು. ವಲಸೆಗಾರರು, ಕೂಲಿ ಕಾರ್ಮಿಕರು ವಾಸಿಸುವ ಪ್ರದೇಶ, ಕೊಳಗೇರಿ, ದುರ್ಗಮ ಪ್ರದೇಶ, ಕುಗ್ರಾಮ, ಗುಡ್ಡಗಾಡು ಪ್ರದೇಶ, ಹಾಡಿಗಳು ಪ್ರವಾಸಿ ತಾಣಗಳು ಮುಂತಾದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಲಸಿಕೆ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸುತ್ತಲಿನ ಪ್ರದೇಶದ ಮಕ್ಕಳಿಗೆ ಲಸಿಕೆ ಕೊಡಿಸಲು ಸಹಾಯ ಮಾಡಿದರು.
ಮೊದಲ ಸ್ಥಾನದಲ್ಲಿ ಭಾರತ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಮಕ್ಕಳ ಕೂಟ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಭಾರತವು ವಿಶ್ವದಲ್ಲೇ ಪೋಲಿಯೋ ಮುಕ್ತ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನದಲ್ಲಿದೆಯೆಂದು ವಿಶ್ವಸಂಸ್ಥೆಯು ಹೇಳಿದ್ದು, ಪಲ್ಸ್ ಪೋಲಿಯೋದಲ್ಲಿ ಆದ ಕ್ರಾಂತಿಯೇ ಇದಕ್ಕೆ ಕಾರಣ ಎಂದು ಹೇಳಿದರು.
ಕರೊನಾ ಇಡೀ ಪ್ರಪಂಚವನ್ನು ಕಾಡಿತ್ತು. ಆದರೆ, ಇಂದು ಅದಕ್ಕೆ ಲಸಿಕೆ ಬಂದಿದ್ದು, ಲಸಿಕೆ ಹಾಕಿಸಿಕೊಳ್ಳಲು ಯಾರೂ ಹೆದರಬಾರದು ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಐದು ವರ್ಷದೊಳಗಿನ ಮಕ್ಕಳಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಹೆಚ್ಚು ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಲ್ಸ್ ಪೋಲಿಯೋ ಮುಕ್ತವಾಗಿರುವ ಭಾರತ ಮುಂದೆ ಕರೊನಾ ಮುಕ್ತ ದೇಶವಾಗಲಿ ಎಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಚ್.ಮಂಜುನಾಥ್, ನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಜೆ.ಗೋಪಿ, ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಮೈಸೂರು ಮಕ್ಕಳ ಕೂಟ ಅಧ್ಯಕ್ಷೆ ನಳಿನಿ ಶ್ರೀಕಂಠ, ಜಿಪಂ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್ ಇತರರು ಪಾಲ್ಗೊಂಡಿದ್ದರು.