

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ತಾಲೂಕಿನ ಹುನಗನಹಳ್ಳಿ ಗ್ರಾಮದ ಐಷಾರಾಮಿ ಮನೆಯೊಂದರಲ್ಲಿ ನಡೆಯುತ್ತಿದ್ದ ಈ ದುಷ್ಕೃತ್ಯ ದೀಪಾವಳಿ ದಿನವಾದ ಬುಧವಾರವೇ ಬಯಲಾಗಿದೆ. ಇದುವೇ ಈ ಅಕ್ರಮ ಇನ್ನೂ ಸಕ್ರಿಯವಾಗಿರುವುದಕ್ಕೆ ಸಾಕ್ಷಿ. ಸಮಾಜದಲ್ಲಿರುವ ಹೆಣ್ಣು ಮಕ್ಕಳ ಮೇಲಿನ ತಿರಸ್ಕಾರ ಭಾವ, ಗಂಡು ಸಂತಾನದ ಮೇಲಿನ ವ್ಯಾಮೋಹವನ್ನು ಈ ಘಟನೆ ಮತ್ತೊಮ್ಮೆ ಬಟಾಬಯಲು ಮಾಡಿದೆ.
ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿತ್ತು. ಇದರ ಅಕ್ರಮ ಜಾಲ ಪಕ್ಕದ ಮೈಸೂರು ಜಿಲ್ಲೆಯಲ್ಲೂ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಿನಿಕ್, ಸ್ಕಾೃನಿಂಗ್ ಸೇರಿದಂತೆ ಅಂದಾಜು 35 ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ಜಾಲ ವಿಸ್ತರಣೆಗೊಂಡಿರುವುದು ತನಿಖೆಯಿಂದ ದೃಢಗೊಂಡಿದೆ. ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿಸಿಪಿಎನ್‌ಡಿಟಿ) ಕಾಯ್ದೆ, ಕೆಪಿಎಂಐಎ ಕಾಯ್ದೆಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಜಿಲ್ಲಾ ಆರೋಗ್ಯ ಇಲಾಖೆಯನ್ನೂ ಸನ್ನದ್ಧಗೊಳಿಸಲಾಗಿದೆ. ಆದಾಗ್ಯೂ, ಮೈಸೂರಿನಲ್ಲಿ ಈ ಅಕ್ರಮಕ್ಕೆ ಸಂಪೂರ್ಣವಾಗಿ ಕಡಿವಾಣ ಬಿದ್ದಿಲ್ಲ ಎಂಬುದು ಈ ಪ್ರಕರಣದಿಂದ ರುಜುವಾತಾಗಿದೆ.
ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿಯ ಮೇರೆಗೆ ಎರಡು ತಿಂಗಳಿಂದ ಕಣ್ಣಿಟ್ಟಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರ ಸಹಯೋಗದಲ್ಲಿ ಬುಧವಾರ ಸಿನಿಮೀಯ ರೀತಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜಾಲ ಪತ್ತೆ ಹಚ್ಚಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪಾಸಣೆಗೆ ಬಂದಿದ್ದ ನಾಲ್ವರು ಗರ್ಭಿಣಿಯರೂ ಈ ಸಂದರ್ಭದಲ್ಲಿದ್ದರು ಎಂಬುದು ಗಮನಾರ್ಹ ಸಂಗತಿ.
ಮೈಸೂರಿನ ಸ್ವಾಮಿ, ಗೋವಿಂದರಾಜು, ಶ್ಯಾಮಲಾ, ಕಾರ್ತಿಕ್, ಕೆ.ಆರ್.ನಗರ ತಾಲೂಕಿನ ಭೇರ್ಯ ಹರೀಶ್ ನಾಯಕ್, ಕೆ.ಸಾಲುಂಡಿಯ ಶಿವಕುಮಾರ್, ಪುಟ್ಟರಾಜು ಆರೋಪಿಗಳಾಗಿದ್ದು, ಈ ಪೈಕಿ ಐವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ಗ್ರಾಮೀಣ ಭಾಗದ ಮಹಿಳೆಯರನ್ನು ಗುರಿ ಮಾಡುತ್ತಿದ್ದ ಆರೋಪಿಗಳು ಲಕ್ಷಾಂತರ ರೂ. ಪಡೆದು ಈ ದುಷ್ಕೃತ್ಯ ನಡೆಸಿರುವುದು, ಭ್ರೂಣದ ಲಿಂಗ ಬಹಿರಂಗಪಡಿಸುವುದಲ್ಲದೇ, ಅದು ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿ ಹತ್ಯೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ.
ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ವಿವೇಕ್ ದೊರೆ, ಮೈಸೂರು ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ, ಮಂಡ್ಯ ಡಿಎಚ್‌ಒ ಡಾ.ಮೋಹನ್‌ಕುಮಾರ್ ನೇತೃತ್ವದಲ್ಲಿ ‘ಡೆಕಾಯ್ ಕಾರ್ಯಾಚರಣೆ’ ನಡೆಯಿತು. ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಅವರ ದೂರು ಆಧರಿಸಿ ವರುಣ ಪೊಲೀಸ್ ಠಾಣೆಯಲ್ಲಿ ಪಿಸಿಪಿಎನ್‌ಡಿಟಿ, ಕೆಪಿಎಂಐಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಪುಟ್ಟಸಿದ್ದಮ್ಮ ಎಂಬ ಗರ್ಭಿಣಿ ಮಹಿಳೆಯ ಸಹಾಯ ಪಡೆದು ನಡೆಸಿರುವ ರಹಸ್ಯ ಕಾರ್ಯಾಚರಣೆ ರೋಚಕವಾಗಿದೆ. ಈ ಮಹಿಳೆಯ ಮೂಲಕ ಸ್ವಾಮಿ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಲಾಯಿತು. ಇವರನ್ನು ಈತ ನಗರದ ಮೆಲ್ಲಹಳ್ಳಿ ವೃತ್ತದ ಕರೆಸಿಕೊಂಡ. ಪುಟ್ಟಸಿದ್ದಮ್ಮ ಅವರ ಮೊಬೈಲ್ ಸಂಖ್ಯೆಯೊಂದಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿ ನಿಗಾ ವಹಿಸಲಾಗಿತ್ತು. ಆರೋಗ್ಯ ಇಲಾಖಾಧಿಕಾರಿಗಳ ತಂಡವು ಮತ್ತೊಂದು ಕಾರಿನಲ್ಲಿ ಕುಳಿತು ಚಲನವಲನದ ಮೇಲೆ ಕಣ್ಗಾವಲು ಇಟ್ಟಿತ್ತು.
ಈ ಸ್ಥಳಕ್ಕೆ ಬಂದ ಇನ್ನೊಬ್ಬ ವ್ಯಕ್ತಿ, ಪುಟ್ಟಸಿದ್ದಮ್ಮ ಅವರೊಂದಿಗೆ ಮಾತನಾಡಿ, ಹಣ ಪಡೆದುಕೊಂಡು ಹೋದ. ಬಳಿಕ ಪುಟ್ಟಸಿದ್ದಮ್ಮ ಅವರನ್ನು ಇನ್ನೊಂದು ಕಾರಿನಲ್ಲಿ ಕರೆದುಕೊಂಡು ಹೋಗಲಾಗಿದೆ. ಈ ಕಾರನ್ನು ತಂಡವು ಹಿಂಬಾಲಿಸಿದಾಗ ಅದು ಹಾರೋಹಳ್ಳಿ ಹೊರಭಾಗದಲ್ಲಿರುವ ಹುನುಗನಹಳ್ಳಿಯ ಅಂಚಿನಲ್ಲಿರುವ ಸ್ವಾಮಿ ಅವರ ಮನೆಗೆ ತಲುಪಿತು. ಆ ನಿವಾಸದ ಒಳಗೆ ಹಠಾತ್ ನುಗ್ಗಿದ ತಂಡವೇ ಚಕಿತಗೊಂಡಿತು. ಸ್ಕಾೃನಿಂಗ್ ಮಾಡುವ ಉಪಕರಣಗಳು, ಅಲ್ಲಿಯ ವ್ಯವಸ್ಥೆ ಕಂಡು ಬೆರಗಾಯಿತು. ಇದೆಲ್ಲವೂ ಸಿನಿಮಾ ದೃಶ್ಯಾವಳಿಯಂತೆ ಗೋಚರವಾಗಿದೆ.
ಅಧಿಕಾರಿಗಳನ್ನು ಕಂಡು ಸ್ಕಾೃನಿಂಗ್ ಬಂದಿದ್ದ ಐದಾರು ಗರ್ಭಿಣಿಯರು ವಿಚಲಿತಗೊಂಡಿದ್ದಾರೆ. ಮೊದಲು ತಿಥಿ ಕಾರ್ಯಕ್ಕೆ ಬಂದಿರುವುದಾಗಿ ಸುಳ್ಳು ಹೇಳಿದ ಅವರೆಲ್ಲರೂ ಬಳಿಕ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್‌ಗಾಗಿ ಸುಮಾರು 30 ಸಾವಿರ ರೂ. ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮನೆಯ ಮಾಲಕಿಯಾದ ಶ್ಯಾಮಲಾ ಬನ್ನೂರಿನ ಎಸ್.ಕೆ.ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆ ಆಸ್ಪತ್ರೆಯ ಬಿಲ್‌ಗಳು, ಇತರ ದಾಖಲೆಗಳು, ಇಂಜೆಕ್ಷನ್, ಮಾತ್ರೆಗಳು ಸಿಕ್ಕಿವೆ. ಬಿ.ಎಸ್ಸಿ ನರ್ಸಿಂಗ್ ಮಾಡಿರುವ ಶ್ಯಾಮಲಾ ತನ್ನ ಗಂಡ ಕಾರ್ತಿಕ್‌ನ ಸಹಕಾರದೊಂದಿಗೆ ಪುಟ್ಟರಾಜು ಎಂಬುವನೊಂದಿಗೆ ಸೇರಿಕೊಂಡು ಈ ಅಕ್ರಮದಲ್ಲಿ ತೊಡಗಿಕೊಂಡಿದ್ದಾಳೆ. ಕಾರ್ಯಚರಣೆಯಿಂದ ಇದು ಬೆಳಕಿಗೆ ಬಂದಿದೆ ಎಂದು ಡಿಎಚ್‌ಒ ಡಾ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಲಿಂಗ ಪತ್ತೆ ಕಾರ್ಯ ನಡೆಯುತ್ತಿತ್ತು ಹಾಗೂ ಈ ವರೆಗೆ ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
‘ಮೊದಲ ಹೆಣ್ಣುಮಗುವಿನ ತಾಯಿಯರಿಗೆ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲಾಗಿದೆ. ಎರಡು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮಹಿಳೆಯರ ಮೇಲೆ ನಿಗಾ ವಹಿಸಲಾಗಿದೆ. ಜತೆಗೆ, ಭ್ರೂಣಲಿಂಗ ಪತ್ತೆ ಪ್ರಕರಣ ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಹಿಂದೆ ಪತ್ತೆಯಾಗಿರುವುದರಿಂದ ನಿಗಾ ವಹಿಸಲಾಗಿದೆ. ಮಂಡ್ಯ ಜಿಲ್ಲೆಯಿಂದಲೂ ಗರ್ಭಿಣಿಯರು ವೈದ್ಯಕೀಯ ತಪಾಸಣೆಗೆ ಮೈಸೂರಿಗೆ ಬರುತ್ತಾರೆ. ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದೂ ಡಿಎಚ್‌ಒ ತಿಳಿಸಿದ್ದಾರೆ
‘ತಮಗೆ ಈಗಾಗಲೇ ಹೆಣ್ಣು ಮಕ್ಕಳಿದ್ದು, ತಮಗೆ ಮತ್ತೊಮ್ಮೆ ಹೆಣ್ಣುಮಗುವಾದ್ದಲ್ಲಿ ತಮ್ಮ ಗಂಡಂದಿರು ತಮಗೆ ತೊಂದರೆ ಕೊಡುತ್ತಾರೆ. ತಮ್ಮ ಗಂಡಂದಿರೇ ತಮಗೆ ಈ ಕಾರ್ಯವನ್ನು ಮಾಡುವಂತೆ ತಿಳಿಸಿ, ಹಣವನ್ನೂ ನೀಡಿದ್ದಾರೆ’ ಎಂದು ಅಲ್ಲಿದ್ದ ಗರ್ಣಿಣಿರಾದ ರೂಪಾ, ಉಮಾ ಕಣ್ಣೀರು ಹಾಕಿದ್ದಾರೆ. ಮೈಸೂರು ತಾಲೂಕಿನಲ್ಲಿ ನಡೆದ ರಹಸ್ಯ ಕಾರ್ಯಾಚರಣೆ ಮೂಲಕ ಆರೋಗ್ಯ ಇಲಾಖೆ ಅಧಿಕಾರಿಗಳು ಭ್ರೂಣ ಹಂತಕರನ್ನು ಸೆರೆಹಿಡಿದಿದ್ದಾರೆ. ಪಿಸಿಪಿಎನ್‌ಡಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಭ್ರೂಣ ಹತ್ಯೆಯ ಹಂತಕರನ್ನು ಮಟ್ಟ ಹಾಕಲು ಸರ್ಕಾರ ಕಟ್ಟಿ ಬದ್ಧವಾಗಿದೆ. ಇದರ ವಿರುದ್ಧ ಆರೋಗ್ಯ ಇಲಾಖೆ ನಿರಂತರ ಹೋರಾಟ ನಡೆಸುತ್ತಿದೆ. ಯಾರು ಎಷ್ಟೇ ದೊಡ್ಡವರಿದ್ದರು, ಹೆಣ್ಣು ಭ್ರೂಣ ಹಂತಕರನ್ನು ಮಟ್ಟಹಾಕಲಿದೆ. ಸಮಾಜವೂ ಈ ಬಗ್ಗೆ ಜಾಗೃತರಾಗಿ ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ