

ಮೈಸೂರು: ನಗರ ಹೊರವಲಯದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಆವರಣದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಚಿರತೆಯ ಚಲನವಲನದಿಂದ ಈ ಪ್ರದೇಶದ ಸುತ್ತಲಿನ ನಿವಾಸಿಗಳು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೂರು ದಿನಗಳ ಹಿಂದೆಯಷ್ಟೇ ಬೋನು ಇರಿಸಿತ್ತು. ಇದರಲ್ಲಿ ಬುಧವಾರ ರಾತ್ರಿ ಚಿರತೆ ಸೆರೆಯಾಗಿದೆ. ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 6 ವರ್ಷದ ಗಂಡು ಚಿರತೆಯಾಗಿದ್ದು, ಬೆಮೆಲ್ ಆವರಣದ ಕುರುಚಲು ಕಾಡಿನಲ್ಲಿ ಅಡಗಿತ್ತು. ಸೆರೆಯಾಗಿರುವ ಚಿರತೆಯನ್ನು ಮೇಲಧಿಕಾರಿಗಳ ಅನುಮತಿ ಪಡೆದು ಬಿಳಿಗಿರಿರಂಗನಬೆಟ್ಟದ ಕೆ.ಗುಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.