ಮೈಸೂರಿನಲ್ಲಿ ಬಿಜೆಪಿ ನಗರ, ಗ್ರಾಮಾಂತರ ಕಾರ್ಯಕಾರಿಣಿ

22MYS624 BJP OFFICE
Published on

ಮೈಸೂರು: ರಾಜ್ಯ ಮತ್ತು ಕೇಂದ್ರಸರ್ಕಾರಗಳ ಜನಪರ ಕಾರ್ಯಕ್ರಮಗಳನ್ನು ಮನೆ, ಮನೆಗೆ ತಲುಪಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಬಿಜೆಪಿ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಯಿತು ಎಂದು ಬಿಜೆಪಿ ನಗರ ವಕ್ತಾರ ಎಂ.ವಿ.ಮೋಹನ್ ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವುದು, ಪಕ್ಷ ಸಂಘಟನೆ, ಸರ್ಕಾರ ಕಾರ್ಯಕ್ರಮಗಳನ್ನು ತಲುಪಿಸುವ ಕುರಿತು ಚರ್ಚಿಸಲಾಯಿತು. ಇದೇ ವೇಳೆ ಎಸ್‌ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ರಾಜ್ಯಸರ್ಕಾರಕ್ಕೆ ಅಭಿನಂದಿಸುವ ನಿರ್ಣಯ ಕೈಗೊಳ್ಳಲಾಯಿತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪಕ್ಷದ ಬಲವರ್ಧನೆ, ಸಂಘಟನೆಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟುಹಬ್ಬದಪ್ರಯುಕ್ತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮನೆಗೂ ತಲುಪಿಸುವ ಕೆಲಸ ಮಾಡಲಾಗಿದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಹಲವು ವರ್ಷಗಳಿಂದ ಇಟ್ಟಿದ್ದ ಬೇಡಿಕೆಯನ್ನು ಈಡೇರಿಸುವ ಜೊತೆಗೆ ಮೀಸಲಾತಿ ಜಾರಿಗೊಳಿಸಲು ಸಂವಿಧಾನದ ಷೆಡ್ಯೂಲ್ 9ಎ ಗೆ ಸೇರಿಸಲು ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಪ್ರಶಂಸಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್, ಉಪಮೇಯರ್ ಸ್ಥಾನವನ್ನು ಪಕ್ಷದ ಸದಸ್ಯರು ಅಲಂಕಾರಿಸಿದ್ದಾರೆ. ಜೊತೆಗೆ ನಾಯಕ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಮೇಯರ್ ಸ್ಥಾನ ಕಲ್ಪಿಸಲಾಗಿದೆ. ಇದಕ್ಕಾಗಿ ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಸೇರಿದಂತೆ ಇತರೆ ಮುಖಂಡರಿಗೆ ಕೃತಜ್ಞತೆ ಸಲ್ಲಿಸಲಾಯಿತು ಎಂದರು.
ನಾಡ ಹಬ್ಬ ದಸರಾವನ್ನು ಯಾವುದೇ ತೊಡಕಿಲ್ಲದೆ ಯಶಸ್ವಿಯಾಗಿ ಮುಗಿಸಿದ ಸಚಿವರು, ಜಿಲ್ಲಾಡಳಿತ, ಶಾಸಕರು, ಸಂಸದರು, ಉಪ ಸಮಿತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ದೇಶ ವಿರೋಧಿ ಸಂಘಟನೆಗಳಿಗೆ ಕಡಿವಾಣ ಹಾಕುವುದಕ್ಕೆ ಪಿಎಫ್‌ಐ ಸಂಘಟನೆ ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಶ್ಲಾಘಿಸಲಾಯಿತು ಎಂದು ಹೇಳಿದರು.
ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಪಿಎಫ್‌ಐ ಬೆಂಬಲಿಸಿಕೊಂಡು ಬರುತ್ತಿರುವ ಕ್ರಮವನ್ನು ಖಂಡಿಸಲಾಯಿತು . ಮೌಲ್ಯಾಧಾರಿತ ರಾಜಕಾರಣಕ್ಕೆ ಕಾಂಗ್ರೆಸ್ ತಿಲಾಂಜಲಿ ಇಟ್ಟಿದ್ದು, ಲೋಕಾಯುಕ್ತವನ್ನು ರದ್ದುಗೊಳಿಸಿ ಎಸಿಬಿ ರಚನೆ ಮಾಡುವ ಮೂಲಕ ತನ್ನ ಹಗರಣಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದನ್ನು ಸಭೆಯಲ್ಲಿ ಖಂಡಿಸಲಾಯಿತು ಎಂದು ತಿಳಿಸಿದರು.
ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಉಸ್ತುವಾರಿ ಹೀರೇಂದ್ರ ಷಾ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವಿ.ಸೋಮಸುಂದರ್, ಎಚ್.ಜಿ.ಗಿರಿಧರ್, ವಾಣೀಶ್‌ಕುಮಾರ್, ಮಾಜಿ ಮೇಯರ್ ಎಸ್.ಸತೀಶ್‌ಸ್ವಾಮಿ ಇತರರು ಹಲವು ವಿಷಯ ಕುರಿತು ಚರ್ಚಿಸಿದರು ಎಂದರು.
ಬಿಜೆಪಿ ನಗರ ಸಹ ಮಾಧ್ಯಮ ವಕ್ತಾರರಾದ ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net