

ಮೈಸೂರು: ನಗರದ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಫೆ.24 ರಿಂದ ಮಾ.5ರವರೆಗೆ ಗುಜರಾತ್ ಕರಕುಶಲ ಉತ್ಸವ ಹಮ್ಮಿಕೊ ಳ್ಳಲಾಗಿದೆ ಎಂದು ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಚ್.ಆರ್. ಮಹದೇವಸ್ವಾಮಿ ಹೇಳಿದರು.
ಫೆ.24 ರಂದು ಸಂಜೆ 4ಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ ಕರಕುಶಲ ಮೇಳಕ್ಕೆ ಚಾಲನೆ ನೀಡುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟೂರಮಠ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ಮೇಳದಲ್ಲಿ ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾಶೀಲರಾಗಿರುವ ಸುಮಾರು 60ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸುವರು. ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್‌ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್‌ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಜೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ- ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ ಉತ್ತಮ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ದೊರೆಯಲಿದೆ ಎಂದರು.
ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೊರೇಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ಈ ಮೇಳದ ಸಂದರ್ಭದಲ್ಲಿ ನೀಡಲಿದ್ದಾರೆ. ಮೇಳಕ್ಕೆ ಬೆ.10 ರಿಂದ ರಾ.8ರ ಅವಧಿಯಲ್ಲಿ ಭೇಟಿ ನೀಡಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಮೇಳದ ಸಂಯೋಜಕ ಶಿವನಂಜಸ್ವಾಮಿ ಇದ್ದರು.