ಮೈಸೂರಿನಲ್ಲಿ ಫೆ.23 ರಿಂದ 24ವರೆಗೆ ನಿಷೇಧಾಜ್ಞೆ ಜಾರಿ

Mysore Udayagiri riot
Published on

ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ವಿವಿಧ ಸಂಘಟನೆಗಳು ಸೋಮವಾರ ಜಾಥಾ, ಕಾರ್ಯಕ್ರಮಗಳನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆ.23ರ ಮಧ್ಯರಾತ್ರಿಯಿಂದ ಫೆ.24ರ ಮಧ್ಯರಾತ್ರಿವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ(ಬಿಎನ್‌ಎಸ್‌ಎಸ್ ಕಾಯ್ದೆ) ಕಲಂ 163 ಅಡಿಯಲ್ಲಿ ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ನಿಷೇಧಾಜ್ಞೆ ಜಾರಿಗೊಳಿಸಿ ಅದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಸಂದರ್ಭ ಮೆರವಣಿಗೆ, ಪ್ರತಿಭಟನೆ, ವಾಹನಗಳ ರ‌್ಯಾಲಿ, ಬಹಿರಂಗ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಪರ ಮತ್ತು ವಿರೋಧ ಘೋಷಣೆ ಕೂಗುವಂತಿಲ್ಲ, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಹಾಗೂ ಕರ ಪತ್ರಗಳನ್ನು ಹಂಚುವಂತಿಲ್ಲ. ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಫೆ.24 ರಂದು ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಗನ್‌ಹೌಸ್ ವೃತ್ತದಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಬೃಹತ್ ಜಾಗೃತಿ ರ‌್ಯಾಲಿ ಮತ್ತು ಸಭೆ ಆಯೋಜಿಸಿದೆ. ದಲಿತಾ ಮಹಾಸಭಾ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಗನ್‌ಹೌಸ್ ವೃತ್ತದಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಮೌನ ಮೆರವಣಿಗೆ ನಡೆಸಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದೆ. ಈ ಮೂರು ಸಂಘಟನೆಗಳು ಒಂದೇ ದಿನ ಒಂದೇ ಸಮಯ ಮತ್ತು ಒಂದೇ ಮಾರ್ಗದಲ್ಲಿ ಜಾಥಾ ಮತ್ತು ಸಮಾವೇಶವನ್ನು ಪ್ರತಿಷ್ಠೆಗಾಗಿ ಹಮ್ಮಿಕೊಂಡಿದ್ದು, ಈ ಸ್ಥಳಗಳು ಪ್ರವಾಸಿಗರು ಸೇರಿದಂತೆ ಜನ ದಟ್ಟಣೆ ಇರುವ ಪ್ರದೇಶವಾಗಿರುವುದರಿಂದ ಕಾನೂನು ಮತ್ತು ಸುವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ನಿಷೇಧಜಾಜ್ಞೆ ಜಾರಿಗೊಳಿಸಲಾಗಿದೆ.

ಉದಯಗಿರಿ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳು ನಗರದಲ್ಲಿ ಫೆ.24 ರಂದು ಮೆರವಣಿಗೆ ಮತ್ತು ಸಮಾವೇಶ ನಡೆಸಲು ಉದ್ದೇಶಿಸಿದೆ. ಒಂದೇ ಸ್ಥಳದಲ್ಲಿ ಹಾಗೂ ಒಂದೇ ಸಮಯದಲ್ಲಿ ಮೂರು ಸಂಘಟನೆಗಳು ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net