ಮೈಸೂರಿನಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

Police
Published on

ಮೈಸೂರು: ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಬುಧವಾರ ಮೈಸೂರು ಪೊಲೀಸ್ ತರಬೇತಿ ಶಾಲೆಯ 8ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸಟೇಬಲ್ ರೈಲ್ವೇಸ್ ಮತ್ತು ಕೆಎಸ್‌ಐಎಸ್‌ಎಫ್ ಪ್ರಶಿಕ್ಷಣಾರ್ಥಿಗಳ ಮತ್ತು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 4ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಬೆಂಗಳೂರು ತರಬೇತಿ ಕೇಂದ್ರದ ಪೊಲೀಸ್‌ಮಹಾನಿರ್ದೇಶಕ ಡಾ.ಪಿ.ರವೀಂದ್ರನಾಥ್ ಪಥಸಂಚಲನ ಪರಿವೀಕ್ಷಣೆ ನಡೆಸಿ ಬಹು ಮಾನ ವಿತರಿಸಿ ಮಾತನಾಡಿ, ಪೊಲೀಸ್ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮನೋಬಲವಿರಬೇಕು. ಇಲಾಖೆಯ ಶಿಸ್ತು, ಸಂಯಮ, ಕಾನೂನುಗಳನ್ನು ಪಾಲಿಸಿ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ತವ್ಯಪ್ರಜ್ಞೆ ಮೆರೆಯಬೇಕು ಎಂದರು.

ಪ್ರಸ್ತುತ ತಂತ್ರಾಂಶಗಳನ್ನು ಬಳಸಿಕೊಂಡು ತನಿಖೆ ಮಾಡುವುದು ಬಹಳ ಸುಲಭವಾಗಿದೆ. ತಾಂತ್ರಿಕ ಬೆಳವಣಿಗೆ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರ ಸೇವೆ ಬಹಳ ಉಚಿತವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಿಸಿಟಿವಿ, ಡ್ರೋನ್ ಕ್ಯಾಮರಾ ಸೇರಿದಂತೆ ಬಹಳಷ್ಟು ಬೆಳವಣಿಗೆ ಆಗುತ್ತಿದೆ. ಸಂಚಾರ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಅವರಿಗೆ ಅಗತ್ಯವಾದಂತಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ಮತ್ತಷ್ಟು ಹೆಚ್ಚಾಗಬಹುದು. ಪೊಲೀಸರ ವೈಯಕ್ತಿಕ ಬದುಕಿಗೆ ಒತ್ತು ನೀಡಿ ವಸತಿ, ವಾಹನಗಳು, ಸಂಪರ್ಕ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ, ಪ್ರಸ್ತುತ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾಗಿರುವವರಿಗೆ ಮುಂದಿನ ದಿನಗಳಲ್ಲಿ ಎಸ್‌ಐ ಆಗುವ ಅವಕಾಶಗಳಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರಿನ ಪೊಲೀಸ್ ತರಬೇತಿ ಶಾಲೆಯ 8ನೇ ತಂಡದಲ್ಲಿ ಬುನಾದಿ ತರಬೇತಿ ಪಡೆದ 240 ಮಹಿಳಾ ಪ್ರಶಿಕ್ಷಣಾರ್ಥಿಗಳ ಪೈಕಿ ಬೆಂಗಳೂರು ಉತ್ತರ ವಿಭಾಗದ ಎಚ್.ಎಸ್. ಗಂಗೆ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು. ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಎಚ್.ಎಸ್. ಗಂಗೆ, ದ್ವಿತೀಯ ಸ್ಥಾನವನ್ನು ಬೆಂಗಳೂರು ನಗರದ ಎಸ್.ಎಂ. ಸೌಂದರ್ಯ, ತೃತೀಯ ಸ್ಥಾನವನ್ನು ಮಂಡ್ಯದ ಮಹಿಳಾ ಪಿಸಿ ಶಿಲ್ಪಶ್ರೀ ಪಡೆದರು.

ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಬಳ್ಳಾರಿ ಜಿಲ್ಲೆಯ ಮಹಿಳಾ ಪಿಸಿ ವಿಜಯಕುಮಾರಿ, ದ್ವಿತೀಯ ಸ್ಥಾನವನ್ನು ರಾಯಚೂರಿನ ಮಹಿಳಾ ಪಿಸಿ ಪವಿತ್ರಾ, ತೃತೀಯ ಸ್ಥಾನವನ್ನು ಮಂಡ್ಯದ ಮಹಿಳಾ ಪಿಸಿ ಎಚ್.ಆರ್. ಚಾಂದಿನಿ ಪಡೆದುಕೊಂಡರು. ಫೈರಿಂಗ್‌ನಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರು ನಗರದ ಮಹಿಳಾ ಪಿಸಿ ಪೂಜಾ, ಬೆಂಗಳೂರು ನಗರದ ಮಹಿಳಾ ಪಿಸಿ ಬಿ.ಎಂ. ಶಿಲ್ಪಾ, ತೃತೀಯ ಸ್ಥಾನವನ್ನು ಬೀದರ್‌ನ ಮಹಿಳಾ ಪಿಸಿ ಶ್ವೇತಾ ತಮ್ಮದಾಗಿಸಿಕೊಂಡರು.

ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 4ನೇ ತಂಡದಲ್ಲಿ ಬುನಾದಿ ತರಬೇತಿ ಪಡೆದ 95 ಮಹಿಳಾ ಪ್ರಶಿಕ್ಷಣಾರ್ಥಿಗಳ ಪೈಕಿ ಬೆಂಗಳೂರಿನ ಕೆ.ಆರ್. ವೈದಿಕ ಸರ್ವೋತ್ತಮ ಪ್ರಶಸ್ತಿ ಪಡೆದರು. ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಕೆ.ಆರ್. ವೈದಿಕಾ, ದ್ವಿತೀಯ ಸ್ಥಾನವನ್ನು, ಬೆಂಗಳೂರಿನ ಶ್ವೇತಾ ಅಲಗೌಡ, ತೃತೀಯ ಸ್ಥಾನವನ್ನು ಬೆಂಗಳೂರಿನ ಟಿ. ರಂಜಿನಿ ಪಡೆದುಕೊಂಡರು. ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಎನ್. ಸುಗುಣ, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಅಂಜುಂ ತೇರದಾಳ, ತೃತೀಯ ಸ್ಥಾನವನ್ನು ಬಳ್ಳಾರಿಯ ಎಚ್. ಪವಿತ್ರಾ ಪಡೆದರು. ರೈಫಲ್ ಶೂಟಿಂಗ್ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಎಚ್.ವಿ. ದಿವ್ಯಾ, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಎ. ಸಿಮ್ರಾನ್, ತೃತೀಯ ಸ್ಥಾನವನ್ನು ಬೆಂಗಳೂರಿನ ಸಾವಿತ್ರಿ ಕೆಂಚರೆಡ್ಡಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ದಕ್ಷಿಣವಲಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್‌ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಎಂ.ಎಸ್. ಗೀತಾ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಎ. ಮಾರುತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net