ಮೈಸೂರಿನಲ್ಲಿ ಪೊಲೀಸರ, ಸಾರ್ವಜನಿಕರ ಮಿಂಚಿನ ಓಟ...!

mysore
Published on

ಮೈಸೂರು: ನಗರದಲ್ಲಿ ಭಾನುವಾರ ಬೆಳಗ್ಗೆ ‘ಕರ್ನಾಟಕ ರಾಜ್ಯ ಪೊಲೀಸ್ ಓಟ’ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು.

ವ್ಯಾಯಮದಿಂದ ದೈಹಿಕ ಸಾಮರ್ಥ್ಯ, ಸೈಬರ್ ಅಪರಾಧಗಳ, ಮಾದಕ ದ್ರವ್ಯ ಮುಕ್ತ ಸಮಾಜದ ಕುರಿತು ಅರಿವು ಮೂಡಿಸಲು ಕೈಗೊಂಡಿದ್ದ ಮ್ಯಾರಥಾನ್‌ಗೆ ಮೈಸೂರು ಅರಮನೆಯಲ್ಲಿ ಹಸಿರು ನಿಶಾನೆ ತೋರಲಾಯಿತು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್‌ರೆಡ್ಡಿ, ಡಿಐಜಿ ಡಾ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಕಾರ್ಯಕ್ರಮ ಉದ್ಘಾಟಿಸಿದರು.

5 ಕಿ.ಮೀ. ಓಟವು ಅರಮನೆಯಿಂದ ಪ್ರಾರಂಭಗೊಂಡ ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ಜಂಕ್ಷನ್, ಮುಡಾ ಕಚೇರಿ, ರಾಮಸ್ವಾಮಿ ವೃತ್ತ, ತಾತಯ್ಯ ವೃತ್ತ, ಗನ್‌ಹೌಸ್ ವೃತ್ತ, ಹಾರ್ಡಿಂಜ್ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.

10 ಕಿ.ಮೀ. ಓಟವು ಅರಮನೆಯಿಂದ ಡಿ.ದೇವರಾಜು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಕಲಾಮಂದಿರ, ಪಡುವಾರಹಳ್ಳಿ, ಬಯಲುರಂಗಮಂದಿರ, ಸೆನೆಟ್ ಭವನ, ಕುವೆಂಪು ಪ್ರತಿಮೆ, ಬೋಗಾದಿ ರಸ್ತೆ, ಫೈರ್ ಬ್ರಿಗೇಡ್, ಏಕಲವ್ಯವೃತ್ತ, ರಾಮಸ್ವಾಮಿ, ತಾತಯ್ಯ ವೃತ್ತ, ಬಸವೇಶ್ವರ ವೃತ್ತ, ಗನ್‌ಹೌಸ್, ಹಾರ್ಡಿಂಜ್ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕೊನೆಗೊಂಡಿತು.

ಸಾರ್ವಜನಿಕರು, ಪೊಲೀಸ್ ಇಲಾಖೆ ಮತ್ತು ಇತರ ವಿಶೇಷ ಘಟಕಗಳಿಂದ ಅಂದಾಜು 9 ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. 10 ಕಿ.ಮೀ. ಓಟದಲ್ಲಿ 17 ಸಾರ್ವಜನಿಕ ಪ್ರತಿಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಲಾಗಿದೆ. ಸುಮೀತ್ ಪಾಲ್ ಪ್ರಥಮ , ವೈ.ಎಸ್.ದೀಕ್ಷಿತ್ ದ್ವಿತೀಯ, ಕೆ.ತನುಜ್‌ಕುಮಾರ್ ತೃತೀಯ ಬಹುಮಾನ ಪಡೆದರು. ಉಳಿಕೆ 14 ಪ್ರತಿಸ್ಪರ್ಧಿಗಳಿಗೆ ಮೆಡಲ್ ಅನ್ನು ವಿತರಣೆ ಮಾಡಲಾಯಿತು. ಪ್ರತಿಸ್ಪರ್ಧಿಗಳಲ್ಲಿ ಫ್ರಾನ್ಸ್ ದೇಶದ 3 ವಿದೇಶಿಯರು ಭಾಗವಹಿಸಿದ್ದು, ಶ್ರೀಮತಿ ಕೋಟ್ಟಿನ್ ಎಂಬುವರಿಗೆ ಬಹುಮಾನ ನೀಡಲಾಯಿತು.

ಪಾರಿತೋಷಕ ವಿತರಣೆ:

5 ಕಿ.ಮೀ. ಓಟದಲ್ಲಿ 9 ಸಾರ್ವಜನಿಕ ಪ್ರತಿಸ್ಪರ್ಧಿಗಳಿಗೆ ಬಹುಮಾನ ನೀಡಲಾಯಿತು. ಸುಮಂತ್ ಪ್ರಥಮ, ಎನ್.ದೊರೆಸ್ವಾಮಿ ದ್ವಿತೀಯ, ಬಿ.ಮಹದೇವಸ್ವಾಮಿ ತೃತೀಯ ಬಹುಮಾನ ಮೆಡಲ್ ಮತ್ತು ಪಾರಿತೋಷಕವನ್ನು ವಿತರಿಸಲಾಯಿತು. ಉಳಿಕೆ 6 ಪ್ರತಿಸ್ಪರ್ಧಿಗಳಿಗೆ ಮೆಡಲ್‌ನ್ನು ವಿತರಣೆ ಮಾಡಲಾಯಿತು. 10 ಕಿ.ಮೀ ಓಟದಲ್ಲಿ 16 ಪೊಲೀಸ್ ಪ್ರತಿಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಅಮರ್ ಮುಲ್ಲಾ ಪ್ರಥಮ, ಪ್ರಭು ಜಮಖಂಡಿ ದ್ವಿತೀಯ, ಎನ್.ಗೋಪಾಲ್ ತೃತೀಯ ಬಹುಮಾನ, ಪಾರಿತೋಷಕ ಪಡೆದರು. ಉಳಿಕೆ 13 ಪ್ರತಿಸ್ಪರ್ಧಿಗಳಿಗೆ ಮೆಡಲ್‌ನ್ನು ವಿತರಣೆ ಮಾಡಲಾಯಿತು.

5 ಕಿ.ಮೀ. ಓಟದಲ್ಲಿ 8 ಪೊಲೀಸ್ ಪ್ರತಿಸ್ಪರ್ಧಿಗಳು ಬಹುಮಾನ ಪಡೆದರು. ಎಂ.ಎಸ್.ರವೀಶ್ ಪ್ರಥಮ, ಮಲ್ಲಪ್ಪ ದ್ವಿತೀಯ,ನಾಗೇಂದ್ರ ತೃತೀಯ ಬಹುಮಾನ, ಮೆಡಲ್ ಮತ್ತು ಪಾರಿತೋಷಕ ಗಳಿಸಿದರು. ಉಳಿಕೆ 5 ಪ್ರತಿಸ್ಪರ್ಧಿಗಳಿಗೆ ಮೆಡಲನ್ನು ವಿತರಣೆ ಮಾಡಲಾಯಿತು.

ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್.ಜಾಹ್ನವಿ ಸೇರಿದಂತೆ ಕೆ.ಎಸ್.ಆರ್.ಪಿ. ರಾವುತ ದಳ, ಸಿ.ಎ.ಆರ್, ವಿಶೇಷವಾಗಿ ಕೆ.ಪಿ.ಎ, ಪೊಲೀಸ್ ತರಬೇತಿ ಶಾಲೆಯ ಅಧಿಕಾರಿ ಮತ್ತು ಪ್ರಶಿಕ್ಷಣಾರ್ಥಿಗಳು, ಕೆಎಸ್‌ಐಎಸ್‌ಎಫ್, ಸಿಐಎಸ್‌ಎಫ್, ರೈಲ್ವೆ, ಎನ್‌ಸಿಸಿ, ಗೃಹರಕ್ಷಕ ದಳ, ಶ್ರೀಪತಂಜಲಿ ಯೋಗ ಶಿಕ್ಷಣ ಟ್ರಸ್ಟ್‌ನಿಂದ ಅಧಿಕಾರಿ ಮತ್ತು ಸಿಬ್ಬಂದಿ, ವಿವಿ ಬಿ.ಪಿ.ಎಡ್ ವಿದ್ಯಾರ್ಥಿಗಳು, ಯೂತ್ ಸರ್ವಿಸ್, ಪೊಲೀಸ್ ಬ್ಯಾಂಡ್, ಮತ್ತು ಇತರ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net