ಮೈಸೂರಿನಲ್ಲಿ ‘ನೈಟ್‌ಲೈಫ್’ ವಾರದಲ್ಲಿ ತೀರ್ಮಾನ: ಗೃಹ ಸಚಿವ ಡಾ.ಜಿ.ಪರಮೇಶ್ವರ

mysore
Published on

ಮೈಸೂರು: ಪ್ರವಾಸಿ ತಾಣವಾಗಿರುವ ಮೈಸೂರು ನಗರದಲ್ಲಿ ಮಧ್ಯರಾತ್ರಿ 1ರವರೆಗೆ ವ್ಯಾಪಾರ, ವಹಿವಾಟು ವಿಸ್ತರಣೆ ಕುರಿತು ವಾರದೊಳಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಹೋಟೆಲ್ ಮಾಲೀಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಈಗಾಗಲೇ ನೈಟ್‌ಲೈಫ್‌ಗೆ ಅನುಮತಿ ನೀಡಲಾಗಿದೆ. ಮೈಸೂರು ನಗರದಲ್ಲೂ ಇದು ಅಗತ್ಯ ಇದೆ. ಈ ಕ್ರಮದಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದರು.

ಮೈಸೂರಿನ ಖ್ಯಾತಿಯನ್ನು ಬೇರೆ ಊರಿಗೆ ಹೋಲಿಸಲಾಗದು. ಇದಕ್ಕೆ ಮೈಸೂರು ಅರಸರ ಕೊಡುಗೆಯೂ ಕಾರಣ. ಆಧುನಿಕ ಯುಗದಲ್ಲಿ ಮೈಸೂರಿನ ಪಾರಂಪರಿಕ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ದೊಡ್ಡ ಕಟ್ಟಡಗಳಿಗೆ ಇಲ್ಲಿ ಅನುಮತಿ ನೀಡಬಾರದು.

ಇಲ್ಲಿನ ಸಾಂಪ್ರದಾಯಿಕತೆ ಉಳಿಯಬೇಕು. ಪ್ರಪಂಚದ ಪ್ರಮುಖ ಪಟ್ಟಣಗಳು ತನ್ನ ಪರಂಪರೆಯನ್ನು ಸಂರಕ್ಷಣೆ ಮಾಡುತ್ತಿವೆ. ಹಾಗೆಯೇ ಮೈಸೂರಿನ ಭವ್ಯ ಪರಂಪರೆಯೂ ಉಳಿಯಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಮೈಸೂರು ಆತಿಥ್ಯಕ್ಕೆ ಹೆಸರುವಾಸಿ. ಇಲ್ಲಿ ಗುಣಮಟ್ಟದ ಸೇವೆ ಗ್ರಾಹಕರಿಗೆ ಸಿಗುತ್ತಿದೆ. ಅದು ಹೆಚ್ವಾಗಬೇಕು. ಸ್ಟಾರ್ ಹೋಟೆಲ್‌ಗಳು ಬರಬೇಕು. ಆದರೆ, ಸ್ಥಳೀಯ ಸಂಪ್ರದಾಯಕ್ಕೆ ಕುಂದಾಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಗೃಹ ಸಚಿವನಾಗಿ ಪ್ರತಿ ದಸರಾ ನಮಗೆ ಸವಾಲು. ಈ ಸಲ ನಿರೀಕ್ಷೆಗಿಂತ ಹೆಚ್ಚು ಜನ ಬಂದರು. ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು ಎಂದರು.

ಪ್ರವಾಸಿ ತಾಣಗಳಲ್ಲಿ ಪ್ರತ್ಯೇಕ ಪೊಲೀಸ್ ಘಟಕ ತೆರೆಯಲು ಯೋಜಿಸಲಾಗುತ್ತಿದೆ. ಹಂಪಿ ಸೇರಿದಂತೆ ಕೆಲವೆಡೆ ಪ್ರವಾಸಿ ಸ್ನೇಹಿ ಪೊಲೀಸರನ್ನು ನಿಯೋಜಿಸಲಾಗುವುದು. ಒಂದೆರಡು ಭಾಷೆ ಕಲಿತ ಸಿಬ್ಬಂದಿಯನ್ನೇ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಡ್ರಗ್ಸ್ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಿಂಥೆಟಿಕ್ ಡ್ರಗ್ ಬಹಳ ಅಪಾಯಕಾರಿ. ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ- ಕಾಲೇಜುಗಳಲ್ಲೂ ಇದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು

ನಗರದ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರ ಸಂಬಂಧ ಕೆಎಸ್‌ಆರ್‌ಟಿಸಿ, ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು. ಜತೆಗೆ, ಹೋಟೆಲ್ ಸಿಬ್ಬಂದಿ, ಮಾಲೀಕರ ಮೇಲೆ ಪೊಲೀಸ್ ಕಿರುಕುಳ ತಪ್ಪಿಸಲು ಸದ್ಯದಲ್ಲೇ ಇಬ್ಬರ ಜತೆಗೆ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿರುವುದು ಖುಷಿ ಸಂಗತಿ. ಕಾಂಗ್ರೆಸ್ ಪ್ರಣಾಳಿಕೆ ರೂಪಿಸಿದ್ದು, ನಮ್ಮದೇ ತಂಡ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಸಂತೋಷವಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಇದನ್ನು ಯಾವ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೋಟೆಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಬಾರದು. ಪೀಪಲ್ಸ್ ಪಾರ್ಕ್ ಜಾಗವನ್ನು ಪಡೆದು ಅಲ್ಲಿಗೆ ನಿಲ್ದಾಣವನ್ನು ವಿಸ್ತರಣೆ ಮಾಡಬೇಕು. ದಸರಾ ಸಂದರ್ಭದಲ್ಲಿ ಅಂತರ ರಾಜ್ಯ ವಾಹನಗಳಿಗೆ ಒಂದೇ ಪ್ರವೇಶ ದರ ವಿಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎ.ಆರ್.ರವೀಂದ್ರಭಟ್, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಆನಂದ ಶೆಟ್ಟಿ ಇನ್ನಿತರರಿದ್ದರು.

ಬೇಡಿಕೆಗಳು ಏನು?

  • ಪ್ರವಾಸಿಗರ ಅನುಕೂಲಕ್ಕಾಗಿ ನಗರದಲ್ಲಿ ರಾತ್ರಿ 1ರವರೆಗೆ ಹೋಟೆಲ್ ಸೇರಿದಂತೆ ಇನ್ನಿತರ ವಹಿವಾಟು ವಿಸ್ತರಣೆಗೆ ಅವಕಾಶ ನೀಡಬೇಕು. ಕಳೆದ ಬಜೆಟ್ ಘೋಷಣೆಯಂತೆ ಇದನ್ನು ಕಾರ್ಯರೂಪಕ್ಕೆ ತರಬೇಕು.
  • ವಾರಾಂತ್ಯ, ರಜೆ ದಿನಗಳಲ್ಲಿ ಎಲ್ಲೆಂದರಲ್ಲಿ ವಾಹನ ತಪಾಸಣೆಯಿಂದ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದ್ದು, ಈ ರೀತಿಯ ವಾಹನ ತಪಾಸಣೆಯನ್ನು ನಿಲ್ಲಿಸಬೇಕು
  • ಅಂತರ ರಾಜ್ಯ ವಾಹನ ತಪಾಸಣೆ ಪ್ರತಿಯೊಂದು ಸ್ಥಳದಲ್ಲಿ ಮಾಡುವ ಬದಲು ರಾಜ್ಯಕ್ಕೆ ಪ್ರವೇಶ ಮಾಡಿದ ಒಂದು ಕಡೆ ಮಾಡಿ ಎಲ್ಲ ದಾಖಲೆ ಸರಿಯಾಗಿದ್ದರೆ ಒಂದು ಸ್ಟಿಕ್ಕರ್ ಅಳವಡಿಸಬೇಕು. ಈ ಮೂಲಕ ಉಂಟಾಗುತ್ತಿರುವ ತೊಂದರೆ, ಕಿರುಕುಳ ತಪ್ಪಿಸಬೇಕು.
  • ಪ್ರವಾಸಿ ತಾಣಗಳಲ್ಲಿ ಇಂಗ್ಲಿಷ್, ಹಿಂದಿ ಭಾಷೆ ಗೊತ್ತಿರುವ ಪೊಲೀಸ್ ಸಿಬ್ಬಂದಿ ನೇಮಿಸಿದರೆ ಅನ್ಯ ಭಾಷಾ ಪ್ರವಾಸಿಗರಿಗೆ ಸಹಕಾರಿಯಾಗಲಿದೆ.
  • ಪಾದಚಾರಿ ಮಾರ್ಗ, ರಸ್ತೆ ಬದಿಯಲ್ಲಿ ನಡೆಯುತ್ತಿರುವ ಫಾಸ್ಟ್‌ಫುಡ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪಾಲಿಕೆ ಸೂಚಿಸಿದ ಜಾಗದಲ್ಲೇ ಇದು ನಡೆಯಲಿ.
  • ಸಯ್ಯಜಿರಾವ್ ರಸ್ತೆ, ದೊಡ್ಡ ಗಡಿಯಾರ ಬಳಿ ಫುಟ್‌ಪಾತ್‌ನಲ್ಲಿ ವಿವಿಧ ವಸ್ತುಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಬೇಕು.
  • ಕದ್ದುಮುಚ್ಚಿ ಹುಕ್ಕಾ ಬಾರ್ ನಡೆಲು ಅವಕಾಶ ನೀಡಬಾರದು. ಹೋಟೆಲ್ ಮಾಲೀಕರು, ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿದೆ. ಸರ್ಕಾರದಿಂದ ಸುಕ್ಷರತಾ ಕಾಯ್ದೆ ಜಾರಿ ಮಾಡಿ ಹೋಟೆಲ್ ವಹಿವಾಟು ಸುಲಲಿತವಾಗಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net