ಮೈಸೂರಿನಲ್ಲಿ ನೀರಿನ ದರ ಪರಿಷ್ಕರಣೆ ಬೇಡ: ಶಾಸಕ ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ಗೃಹಬಳಕೆ ನೀರು ಮತ್ತು ಒಳಚರಂಡಿ ಶುಲ್ಕದ ಪರಿಷ್ಕರಣೆ ಕೈಬಿಡಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ನೀರು ಸರಬರಾಜು ವ್ಯವಸ್ಥೆಗೆ ಪ್ರತಿವರ್ಷ 49.90 ಕೋಟಿ ರೂ. ವಿದ್ಯುತ್ ವೆಚ್ಚವಾಗುತ್ತಿದ್ದು, ಇದು ನೀರು ಸರಬರಾಜು ನಿರ್ವಹಣಾ ವೆಚ್ಚದ ಶೇ.50 ರಷ್ಟು ಆಗಿರುತ್ತದೆ. ಪ್ರಸ್ತುತ ವಿದ್ಯುತ್ ಬಿಲ್‌ಅನ್ನು ಸರ್ಕಾರ ಎಸ್‌ಎಫ್‌ಸಿ ಅನುದಾನದಲ್ಲಿ ನೀಡಲಾಗುತ್ತಿದೆ. ಆದರೆ, ಸರ್ಕಾರ ಈ ಅನುದಾನವನ್ನು ಕಡಿತಗೊಳಿಸುವ ಉದ್ದೇಶ ಹೊಂದಿಲ್ಲದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯ ಮೂಲ ಉದ್ದೇಶವೇ ತರ್ಕರಹಿತವಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.

ಪಾಲಿಕೆಯ 65 ವಾರ್ಡ್‌ಗಳು ಹಾಗೂ ಹೊರವಲಯ ಪ್ರದೇಶಗಳಿಗೆ ನೀರು ಸರಬರಾಜು ವ್ಯವಸ್ಥೆಯಲ್ಲಿ ಹಲವು ಲೋಪದೋಷ ಗಳಿವೆ. ಈ ಲೋಪ ಸರಿಪಡಿಸಿದರೆ ಪಾಲಿಕೆ ಬರುವ ಆದಾಯ ಹೆಚ್ಚಾಗಲಿದೆ. ನಗರಕ್ಕೆ ಪ್ರತಿನಿತ್ಯ 335 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಇದರಲ್ಲಿ ಕೇವಲ 1400 ಎಂಲ್‌ಡಿಗೆ ಮಾತ್ರ ಬಿಲ್ಲಿಂಗ್ ಆಗುತ್ತಿದೆ. ಉಳಿದ 195 ಎಂಲ್‌ಡಿಗೆ ಲೆಕ್ಕ ಇಲ್ಲ. ಪ್ರತಿ ತಿಂಗಳು 1.8 ಲಕ್ಷ ಬಳಕೆದಾರರಿಗೆ ಬಿಲ್ಗಳನ್ನು ನೀಡಲಾಗುತ್ತಿದ್ದು, ಈ ಪೈಕಿ ಮೂರನೇ ಒಂದು ಭಾಗಷ್ಟು ಅಂದರೆ ಸುಮಾರು 60,000 ಬಳಕೆದಾರರು ಮಾತ್ರ ಪ್ರತಿ ತಿಂಗಳು ಬಿಲ್ ಪಾವತಿಸುತ್ತಿದ್ದಾರೆ. ಇನ್ನುಳಿದ 1.20 ಲಕ್ಷ ಬಳಕೆದಾರರು ಬಿಲ್ ಪಾವತಿಸುವಂತೆ ಪಾಲಿಕೆ ಉತ್ತೇಜಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 40,000 ಅನಧಿಕೃತ ನೀರಿನ ಸಂಪರ್ಕಗಳಿದ್ದು ಅವುಗಳನ್ನು ಅಧಿಕೃತಗೊಳಿಸಿ ಪಾಲಿಕೆಯ ತೆರಿಗೆ ಜಾಲಕ್ಕೆ ಒಳಪಡಿಸಿದರೆ ಪಾಲಿಕೆ ಆದಾಯ ಹೆಚ್ಚಲಿದೆ.

ಒಳಚರಂಡಿ ಶುಲ್ಕವನ್ನು ಶೇ.30 ರಿಂದ ಶೇ.40ಕ್ಕೆ ಏರಿಸುವ ಪ್ರಸ್ತಾವನೆಯನ್ನು ಪಾಲಿಕೆ ಮಂಡಿಸಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅನುದಾನದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ದೊಡ್ಡ ವಾಣಿಜ್ಯ, ವಸತಿಯೇತರ ಕಟ್ಟಡಗಳಿಂದ ಕ್ಟೃಟ್ಟಠಿ ಶುಲ್ಕವನ್ನು ಪಾವತಿಸಿಕೊಂಡು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ ಪ್ರತ್ಯೇಕ ಎಸ್ಕ್ರೋ ಅಕೌಂಟ್ ನಿರ್ವಹಿಸುವುದರಿಂದ ಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ ಆದಾಯ ಹೆಚ್ಚಲಿದ್ದು, ಬರುವ ಹಣವನ್ನು ಹೊಸ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕೆ ಮಾತ್ರ ಬಳಸಬಹುದು.

ಪಾಲಿಕೆಯು ಅವಶ್ಯಕವಾಗಿರುವ ಈ ಮೇಲ್ಕಂಡ ಕ್ರಮಗಳನ್ನು ಕೈಗೊಳ್ಳದೆ ಸರಾಸರಿ ಶೇ.60 ರಷ್ಟು ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕ ಹೆಚ್ಚಿಸಲು ಮುಂದಾಗುತ್ತಿರುವುದು ಸರಿಯಲ್ಲ. ಇದರಿಂದ ಪ್ರಾಮಾಣಿಕವಾಗಿ ಬಿಲ್ ಪಾವತಿಸುತ್ತಿರುವ ಬಳಕೆದಾರರಿಗೆ ಅನೈಸರ್ಗಿಕ ನ್ಯಾಯ ನೀಡಿದಂತಾಗಲಿದ್ದು, ಬಿಲ್ ಪಾವತಿಸುವ ಬಳಿಕೆದಾರರನ್ನು ನಿರುತ್ಸಾಹಿಗಳನ್ನಾಗಿಸುವ ಸಂಭವವಿರುತ್ತದೆ. ಹಾಗಾಗಿ ಪಾಲಿಕೆ ಗೃಹಬಳಕೆ ನೀರಿನ ಮತ್ತು ಒಳಚರಂಡಿ ಶುಲ್ಕದ ಪರಿಷ್ಕರಣೆ ಪ್ರಸ್ತಾವನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net