ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿ ಹತ್ಯೆ?

kulakarni_ IB officer
Published on

ಮೈಸೂರು: ನಿವೃತ್ತ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿ ಆರ್.ಎನ್. ಕುಲಕರ್ಣಿ(82) ಸಾವಿನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆ ಅಪಘಾತದಲ್ಲಿ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈಗ ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನಗರದ ಮೈವಿವಿ ಮಾನಸಗಂಗೋತ್ರಿಯ ಆವರಣದಲ್ಲಿ ಶುಕ್ರವಾರ ಸಂಜೆ ಅಪಘಾತ ಘಟನೆ ನಡೆದಿತ್ತು. ಶಾರದಾದೇವಿನಗರದ ನಿವಾಸಿಯಾದ ಇವರಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದ ಬಗ್ಗೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮಾನಸಗಂಗೋತ್ರಿಯ ಆವರಣದಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು, ಪ್ರಕರಣವನ್ನು ಜಯಲಕ್ಷ್ಮೀಪುರಂ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.


ಇವರು ಎಂದಿನಂತೆ ಶುಕ್ರವಾರ ಸಂಜೆ ವಾಯುವಿಹಾರಕ್ಕಾಗಿ ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ನಿತ್ಯ ಒಂದು ಕಡೆ ಕಾರು ನಿಲ್ಲಿಸಿಕೊಂಡು ಚಾಲಕ ನಿಂತಿದ್ದರು. ಆ ವೇಳೆ ವಾಯುವಿಹಾರ ಮಾಡುತ್ತಿದ್ದ ಕುಲಕರ್ಣಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಯಿತು. ವಿಷಯ ತಿಳಿದ ತಕ್ಷಣ ಅವರ ಕಾರು ಚಾಲಕ ಸ್ಥಳಕ್ಕೆ ದೌಡಾಯಿಸಿ, ಸರಸ್ವತಿಪುರಂ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆದರೆ, ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದರು.

ಸಿಸಿ ಟಿವಿ ಕ್ಯಾಮರಾ ಪರಿಶೀಲನೆ
ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ರಸ್ತೆ ಅಪಘಾತದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಲ್ಲಿದ್ದ ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಾರಿಗೆ ನೋಂದಣಿ ಸಂಖ್ಯೆ ಇಲ್ಲದೇ ಇರುವ ಕಾರ್ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಕಮಡುಬಂತು.

ಕೊಲೆ ಮಾಡುವ ಉದ್ದೇಶ?:
ಏಕಾಏಕಿ ಡಿಕ್ಕಿ ಹೊಡೆದ ಮೇಲೆ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ಕೊಲೆ ಉದ್ದೇಶ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ರಸ್ತೆ ಬದಿಗೆ ಕಾರು ತರಚಿರುವುದು ಸಹ ಕಂಡು ಬಂದಿದೆ. ವಾಯುವಿಹಾರಕ್ಕೆ ಬಂದಿದ್ದ ರಸ್ತೆಯು ಸಾರ್ವಜನಿಕ ರಸ್ತೆಯಲ್ಲ ಎಂಬುದು ಉದ್ದೇಶಪೂರ್ವಕವಾಗಿ ಕೊಲೆ ಮಾಡುವ ಉದ್ದೇಶವಿದೆ ಎಂಬ ಅಂಶ ಪೊಲೀಸರಲ್ಲಿ ಬಲಗೊಂಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net