

ಮೈಸೂರು: ಸಾರ್ವಜನಿಕರ ತೆರಿಗೆ ಹಣದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ನಗರದಲ್ಲಿ ನಿರ್ಮಿಸಿರುವ ಮಿನಿ ಮಾರುಕಟ್ಟೆಗಳು ಈಗ ನಿರುಪಯುಕ್ತವಾಗಿವೆ.
ವಿವಿಧ ಬಡಾವಣೆಯ 9 ಕಡೆ ಮಿನಿ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಈಗ ಪಳೆಯುಳಿಕೆಗಳಂತೆ ನಿಂತಿವೆ. ಹಣ್ಣು, ತರಕಾರಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ರೈತರಿಂದ ನೇರ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಈ ಮಿನಿ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ.
ವಿಜಯನಗರ 2ನೇ ಹಂತ, ಶಕ್ತಿನಗರ, ಅರವಿಂದನಗರ, ಕಲ್ಯಾಣಗಿರಿನಗರ, ಶಾರದಾದೇವಿನಗರ, ಹೆಬ್ಬಾಳ ಮೂರನೇ ಹಂತದ ಸುಬ್ರಹ್ಮಣ್ಯನಗರ ಸೇರಿದಂತೆ ಒಂಬತ್ತು ಕಡೆ ಮಿನಿ ತರಕಾರಿ ಮಾರುಕಟ್ಟೆಗಳು ನಿರ್ಮಾಣಗೊಂಡಿವೆ. ಈಗ ಅವು ಬಳಕೆ ಆಗದಿರುವುದರಿಂದ ಗಿಡಗಂಟಿಗಳು ಬೆಳೆದುಕೊಂಡು ಸೊರಗಿವೆ. ಅಲ್ಲದೆ, ಈ ಕಟ್ಟಡಗಳು ಪುಂಡಪೋಕರಿಗಳು, ಕುಡುಕರು, ಜಾನುವಾರು, ನಾಯಿಗಳಿಗೆ ಆಶ್ರಯ ತಾಣವಾಗಿವೆ.
ಜನರು ಹೆಚ್ಚಾಗಿ ದೇವರಾಜ ಮಾರುಕಟ್ಟೆ, ವಾಣಿವಿಲಾಸ, ಮಂಡಿ, ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಗಳಿಗೆ ದೂರದ ಬಡಾವಣೆಗಳಿಂದಲೂ ಬರುತ್ತಾರೆ. ಇದರಿಂದ ನಗರದ ಹೃದಯ ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಹಬ್ಬ, ವಿಶೇಷ ದಿನಗಳಲ್ಲಿ ಜನರ ಬವಣೆ ಹೇಳತೀರದು.
ಹಾಗಾಗಿ, ಬಡಾವಣೆಗಳಲ್ಲಿ ನಿರ್ಮಿಸಿರುವ ಮಿನಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುವಂತಾದರೆ ವಾಹನಗಳ ದಟ್ಟಣೆ, ಜನರ ಸಮಯವನ್ನು ಉಳಿಸಬಹುದು. ಆದರೆ ಮಾರುಕಟ್ಟೆಯ ಬಗ್ಗೆ ಪ್ರಚಾರ ನೀಡುವಂತಹ ಕನಿಷ್ಠ ಕೆಲಸವನ್ನು ಮುಡಾ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡುತ್ತಿಲ್ಲ ಎನ್ನುವ ಆರೋಪವಿದೆ. ಮಾರುಕಟ್ಟೆಗಳನ್ನು ಬಳಸಿಕೊಳ್ಳವಂತೆ ಮುಡಾ ಹಲವು ಪ್ರಯತ್ನಗಳನ್ನು ಮಾಡಿದರೂ, ತರಕಾರಿ ಮಾರಾಟಗಾರರು ಮತ್ತು ಖರೀದಿದಾರರ ಕೊರತೆಯಿಂದಾಗಿ ವಿಫಲವಾಗಿವೆ. ಜನರು ಸ್ಪಂದಿಸಿದರೆ ಹೆಚ್ಚು ಉಪಯೋಗವಾಗುತ್ತದೆ. ಮಿನಿ ಮಾರುಕಟ್ಟೆಗಳು ಉಪಯೋಗಕ್ಕೂ ಬರುತ್ತವೆ ಎನ್ನುವುದು ಅಧಿಕಾರಿಗಳ ವಾದವಾಗಿದೆ.
ಜನ ಇಲ್ಲದ ಕಡೆ ನಿರ್ಮಾಣ
ಬಳಸಲು ಕ್ರಮ ಕೈಗೊಳ್ಳಬೇಕು
ಜನನಿಬಿಡ ಪ್ರದೇಶಗಳಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಬೇಕು. ಆದರೆ ಈ ಹಿಂದೆ ಮುಡಾದಿಂದ ಮಿನಿ ಮಾರುಕಟ್ಟೆಗಳನ್ನು ಜನರ ಓಡಾಟ ಹೆಚ್ಚಿಲ್ಲದ ಕಡೆಗಳಲ್ಲಿ ನಿರ್ಮಿಸಲಾಗಿದೆ. ಹಾಗಾಗಿ, ವ್ಯಾಪಾರಸ್ಥರು ಹೋದರೂ ಹಣ್ಣು ಕೊಳ್ಳುವ ಗ್ರಾಹಕರು ಬಾರದ ಕಾರಣ ಮಿನಿ ಮಾರುಕಟ್ಟೆಗಳು ಹೆಚ್ಚು ಉಪಯೋಗಕ್ಕೆ ಬರುತ್ತಿಲ್ಲ.
ಎಚ್.ವಿ.ರಾಜೀವ್
ಮುಡಾ ಮಾಜಿ ಅಧ್ಯಕ್ಷ
ಸ್ಥಳ ಪರಿಶೀಲಿಸಿ ಮುಂದಿನ ಕ್ರಮ
ತರಕಾರಿ ಮತ್ತು ಹಣ್ಣು ಮಾರಾಟ ಮಾಡುವ ರೈತರಿಗೆ ಉಚಿತವಾಗಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲು ಮುಡಾ ಚಿಂತನೆ ನಡೆಸುತ್ತಿದೆ. ಈ ಮಾರುಕಟ್ಟೆಗಳನ್ನು ಜನಪ್ರಿಯಗೊಳಿಸಲು ಹಾಗೂ ಅವುಗಳ ಸ್ಥಿತಿಗತಿಯನ್ನು ತಿಳಿದು ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದು.
ದಿನೇಶ್ ಕುಮಾರ್
ಆಯುಕ್ತ, ಮುಡಾ
ನಷ್ಟ ಅನುಭವಿಸುತ್ತಿದ್ದಾರೆ
ದೂರದೃಷ್ಟಿಯಿಂದ ಮಿನಿ ಮಾರುಕಟ್ಟೆಗಳನ್ನು ನಿರ್ಮಿಸಿದ್ದರೂ ಜನರೇ ಬಾರದೆ ವ್ಯಾಪಾರಸ್ಥರು ಹೋಗಿ ಏನು ಮಾಡಲು ಸಾಧ್ಯ? ಪ್ರಾಯೋಗಿಕವಾಗಿ ವಿಜಯನಗರದದ ಬಳಿ ವ್ಯಾಪಾರ ಮಾಡುತ್ತಿದ್ದರೂ, ಗ್ರಾಹಕರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ವ್ಯಾಪಾರಸ್ಥರು ದಿನವೆಲ್ಲ ಕುಳಿತು ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ.
ಎಸ್.ಮಹದೇವ್
ಅಧ್ಯಕ್ಷರು, ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘ
ಸ್ವಚ್ಛಗೊಳಿಸಿ ಸೌಲಭ್ಯ ಕಲ್ಪಿಸಿ
ರೈತರು ಹಾಗೂ ಗ್ರಾಹಕರಿಗಾಗಿ ಕಟ್ಟಿದ ಸುಸಜ್ಜಿತ ಕಟ್ಟಡದ ಸದುಪಯೋಗವಾಗಬೇಕು. ರೈತರು ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರದ ಆಶ್ರಯವೂ ಬೇಕು. ಅದಕ್ಕೆ ಸೂಕ್ತ ಪ್ರಚಾರ, ಮಿನಿ ಮಾರುಕಟ್ಟೆಯಲ್ಲಿ ಸೌಲಭ್ಯ, ಸ್ವಚ್ಛತೆಯೂ ಬೇಕು. ಈ ಮೂಲಕ ನಿರ್ಮಿಸಿರುವ ಮಾರುಕಟ್ಟೆಗಳ ಸದುಪಯೋಗವಾಗಬೇಕು.
ಕೃಷ್ಣಪ್ರಸಾದ್ , ಸಹಜ ಸಮೃದ್ಧಿ ಸಂಸ್ಥೆ
ರಸ್ತೆ ಬದಿಯವರಿಗೆ ಅವಕಾಶ ನೀಡಿ
ರಸ್ತೆ ಬದಿ ತಳ್ಳುಗಾಡಿ, ಟೆಂಟ್‌ಗಳನ್ನು ಹಾಕಿಕೊಂಡು ಬಿಸಿಲು, ಮಳೆ ಎನ್ನದೆ ವ್ಯಾಪಾರ ಮಾಡುತ್ತಾರೆ. ಇಂತಹವರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಜತೆಗೆ, ಮಾರುಕಟ್ಟೆಗಳ ಬಗ್ಗೆ ಜನರಿಗೆ ತಿಳಿಯುವಂತೆ ಮಾಡಬೇಕು. ಪಾರ್ಕಿಂಗ್ ಜಾಗ ವ್ಯವಸ್ಥೆ ಮಾಡಿಕೊಡಬೇಕು. ಜನರು ಬಂದರೆ ವ್ಯಾಪಾರ ಮುಂದುವರಿಯುತ್ತದೆ.
ಎಂ.ಬಿ.ವಿನಯ್‌ಕುಮಾರ್
ಸರಸ್ವತಿಪುರಂ
ತೆರಿಗೆ ಹಣ ವ್ಯರ್ಥಗೊಳಿಸಬಾರದು
ಜನರ ಕೋಟ್ಯಂತರ ರೂ. ತೆರಿಗೆ ಹಣದಲ್ಲಿ ಮಿನಿ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳನ್ನು ನಿರ್ಮಿಸಿದ ಮೂಲ ಉದ್ದೇಶವೇ ಪೂರೈಸಿಲ್ಲ. ಜನರು ಕಟ್ಟಿದ ತೆರಿಗೆ ಹಣವನ್ನು ಹೀಗೆ ವ್ಯರ್ಥ ಮಾಡುವುದು ಸರಿಯಲ್ಲ. ಅಧಿಕಾರದಲ್ಲಿ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಗಿರೀಶ್‌ಗೌಡ, ಕುವೆಂಪುನಗರ
ಬಡಾವಣೆಗಳಲ್ಲಿ ಅನುಕೂಲ ಕಲ್ಪಿಸಿ
ದೇವರಾಜ ಮಾರುಕಟ್ಟೆ, ಅಗ್ರಹಾರ, ಮಂಡಿ, ಎಂ.ಜಿ.ರಸ್ತೆ ಮಾರುಕಟ್ಟೆಗಳಲ್ಲಿ ಜನರು ಹೆಚ್ಚಾಗಿರುತ್ತಿದ್ದು, ಹಬ್ಬ, ವಿಶೇಷ ದಿನಗಳಲ್ಲಿ ಕಾಲಿಡಲು ಜಾಗ ಇರುವುದಿಲ್ಲ. ನಗರದ ಬಹುತೇಕ ಜನರು ಈ ಮಾರುಕಟ್ಟೆಗೆ ಬರುವುದರಿಂದ ಒತ್ತಡ ಹೆಚ್ಚಾಗಿದೆ. ಹಾಗಾಗಿ ಮಿನಿ ಮಾರುಕಟ್ಟೆಗಳನ್ನು ಸೂಕ್ತವಾಗಿ ನಿರ್ವಹಿಸಿ ಬಡಾವಣೆಗಳಲ್ಲಿಯೇ ಹಣ್ಣು- ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
ಕಾವೇರಿ
ರಾಮಾನುಜ ರಸ್ತೆ
ಸಾಕಷ್ಟು ಜನರಿಗೆ ತಿಳಿದಿಲ್ಲ
ಮಿನಿ ಮಾರುಕಟ್ಟೆಗಳು ಇವೆ ಎನ್ನುವುದೇ ಸಾಕಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದ ಎಲ್ಲ ಮಿನಿ ಮಾರುಕಟ್ಟೆಗಳನ್ನು ಸ್ವಚ್ಛಗೊಳಿಸಿ ನಿರ್ವಹಣೆ ಮಾಡಬೇಕು. ಅಲ್ಲದೆ, ಅವುಗಳ ಬಗ್ಗೆ ಪ್ರಚಾರ ಮಾಡಬೇಕು. ರೈತರಿಗೆ ಮಾತ್ರ ಉಚಿತ ಎನ್ನದೆ ಸಣ್ಣಪುಟ್ಟ ವ್ಯಾಪಾರಿಗಳಿಗೂ ವ್ಯಾಪಾರ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು.
ಲಿಂಗರಾಜು
ಚಾಮರಾಜ ಮೊಹಲ್ಲಾ