

ಮೈಸೂರು: ನಗರದಲ್ಲಿ ಶನಿವಾರ ಬೆಳಗ್ಗೆ ಜಿಟಿ ಜಿಟಿ ಮಳೆ ಬಿದ್ದು ತಂಪಿನ ವಾತಾವರಣವನ್ನುಂಟು ಮಾಡಿತು.
ಈ ಸಲ ಮುಂಗಾರು ವಿಳಂಬವಾಗಿತ್ತು. ಜುಲೈ ಅಂತ್ಯದಲ್ಲಿ ಒಂದು ವಾರ ಕಾಲ ಮಳೆಯಾಗಿತ್ತು. ಬಳಿಕ ಮಳೆ ಆಗಿರಲಿಲ್ಲ. ಇದರಿಂದಾಗಿ ತಾಪಮಾನ ಏರಿಕೆಯಾಗಿತ್ತು. ಜನರು ವರ್ಷಧಾರೆ ನಿರೀಕ್ಷೆಯಲ್ಲಿದ್ದರು. ಅಂತೆಯೇ ಶನಿವಾರ ಮಳೆ ಸುರಿದಿದೆ.
ಬೆಳಗ್ಗೆ 7 ಗಂಟೆವರೆಗೂ ಮಳೆಯ ಮುನ್ಸೂಚನೆಯೇ ಇರಲಿಲ್ಲ. ಬಳಿಕ ಮೋಡ ಕವಿದು ಮಳೆ ಸುರಿಯಲು ಆರಂಭಿಸಿತು. 9 ಗಂಟೆ ಹೊತ್ತಿಗೆ ಕೊಂಚ ಬಿರುಸುಗೊಂಡಿತು. ಹತ್ತು ಗಂಟೆವರೆಗೆ ಮಳೆ ಸುರಿಯಿತು. ಸಂಜೆ 4 ಗಂಟೆ ಬಳಿಕ ಬಿಸಿಲಿನ ದರ್ಶನವಾಯಿತು.
ಚಾಮುಂಡಿಬೆಟ್ಟದಲ್ಲೂ ಮಳೆಯಾಗಿದೆ. ವಾಯುವಿಹಾರಗಳು ನೆನೆಯುತ್ತಲೇ ಮೆಟ್ಟಿಲು ಹತ್ತಿ ಬೆಟ್ಟಕ್ಕೆ ತೆರಳಿದರು. ಕೆಲವರು ಮರಗಳ ಕೆಳಗೆ ಆಶ್ರಯ ಪಡೆದುಕೊಂಡಿದ್ದರು.
ವಾರಾಂತ್ಯವಾಗಿದ್ದರಿಂದ ನಾಡದೇವಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿಬೆಟ್ಟಕ್ಕೆ ಭಕ್ತ ಸಮೂಹ ಹರಿದು ಬಂದಿತ್ತು. ಭಕ್ತರೆಲ್ಲ ಮಳೆಯಲ್ಲಿ ನೆನೆದರು. ಬೆಟ್ಟದಲ್ಲಿ ಮೋಡಗಳ ಚಿನ್ನಾಟವೇ ನಡೆಯಿತು. ಮಂಜು ಸುರಿಯುತ್ತಿದ್ದರಿಂದ ಹತ್ತು ಮೀಟರ್ ದೂರ ಇದ್ದ ವಸ್ತುಗಳು ಕಾಣುತ್ತಿರಲಿಲ್ಲ.
ಹಿಮದಿಂದಾಗಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಪ್ರವಾಸಿಗರು, ಭಕ್ತರು ಸಂಭ್ರಮಿಸಿದರು. ಸೆಲ್ಫಿಯೊಂದಿಗೆ ಅಲ್ಲಿಯ ಸನ್ನಿವೇಶವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡರು. ಜತೆಗೆ, ಸವಾರರು ಲೈಟ್ ಹಾಕಿಕೊಂಡು ವಾಹನ ಸಂಚಾರ ಮಾಡಿದರು.