

ಮೈಸೂರು: ಕನ್ನಡ ನಾಡು ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹೇಳಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ವಿಷ್ಣುಸೇನಾ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ವಿಷ್ಣುವರ್ಧನ್ 13ನೇ ಸ್ಮರಣೆ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ವಿಷ್ಣುವರ್ಧನ್ ಅವರ ಜೀವನ ಕಿರಿಯ ನಟರಿಗೆ ಮಾದರಿ ಎಂದರು.
ಚಿತ್ರ ನಿರ್ಮಾಪಕ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಡಾ.ವಿಷ್ಣುವರ್ಧನ್. ಆ ಮೇರು ನಟನ ಆದರ್ಶಮಯ ಜೀವನ ಎಲ್ಲರಿಗೂ ಮಾದರಿ. ಸದಾಕಾಲವೂ ಸ್ಥಿತಪ್ರಜ್ಞೆ ಹೊಂದಿದ್ದ ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು. ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದರು.
ಈ ಸಂದರ್ಭ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ಮೇಲುಕೋಟೆ ವೆಂಗೀಪುರ ನಂಬಿಮಠದ ಇಳೈಆಳ್ವಾರ್ ಸ್ವಾಮಿ, ನಗರಪಾಲಿಕ ಸದಸ್ಯ ಸತೀಶ್, ಸಾಮಾಜಿಕ ಹೋರಾಟಗಾರರಾದ ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಬ್ರಹ್ಮಚಾರ್, ನವೀನ್, ದೀಪಕ್ ಹಾಗೂ ಇತರರು ಇದ್ದರು.