

ಮೈಸೂರು: ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟದ ವತಿಯಿಂದ ರಾಜ್ಯ ಮಟ್ಟದ ದ್ವಿತೀಯ ಯೋಗ ಸಮ್ಮೇಳನವನ್ನು ಜೂ.22ರಂದು ಬೆಳಗ್ಗೆ 8.30ಕ್ಕೆ ನಗರದ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ.
ಯೋಗ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕೋಟೆಮನೆ ಪ್ರೊ. ರಾಮಚಂದ್ರ ವಿ. ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹಿರಿಯ ವೈದ್ಯ ಡಾ.ಎಸ್.ಪಿ. ಯೋಗಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಗ ಜೀವನ ಶೈಲಿಯಾಗಬೇಕು. ಅದು ಕೇವಲ ಆಸನಗಳಲ್ಲ. ವಿವಿಧ ಬಗೆಯ ಆಸನ, ಜೀವನಶೈಲಿಗಳ ಮೂಲಕ ಮನಸ್ಸಿನ ನಿಯಂತ್ರಣ ಸಾಧ್ಯ ಎಂಬುದನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಯೋಗಾಸಕ್ತರು ಆಗಮಿಸಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಯೋಗ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು
ಒಕ್ಕೂಟದ ಪ್ರಮುಖರಾದ ದೇವರಾಜು, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ, ಅನಂತು, ಮೂರ್ತಿ, ರಮೇಶ್, ಶಾಂತಾರಾಮ್, ಯೋಗ ಕುಮಾರ್, ಪಶುಪತಿ ಇದ್ದರು.