ಮೈಸೂರಿನಲ್ಲಿ ಚಾಮರಾಜ ಒಡೆಯರ್ ಜಯಂತಿ ಆಚರಣೆ

Chamaraja Wodeyar Jayanti celebrated in Mysore
Published on

ಮೈಸೂರು: ಮೈಸೂರು ವಿಶ್ವವಿಖ್ಯಾತಿ ಹೊಂದಲು ಸಾಂಸ್ಕೃತಿಕ, ಸಾಮಾಜಿಕ ಹಾಗೂ ವೈಜ್ಞಾನಿಕ ದೂರದೃಷ್ಟಿಯುಳ್ಳ 10ನೇ ಚಾಮರಾಜ ಒಡೆಯರ್ ಕೊಡುಗೆ ಅಪಾರ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.

ಮೈಸೂರು ಸಂಸ್ಥಾನದ ಮಹಾರಾಜ 10ನೇ ಚಾಮರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ನಗರದ ಚಾಮರಾಜ ಒಡೆಯರ್ ವೃತ್ತದಲ್ಲಿ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಮೈಸೂರಿಗರಿಗೆ ಒಂದೆ ಸೂರಿನಡಿಯಲ್ಲಿ ಸ್ವದೇಶಿ ಮತ್ತು ವಿದೇಶಿ ಪದಾರ್ಥಗಳ ಪರಿಚಯ, ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ನೀಡಲು ಹಾಗೂ ಕರಕುಶಲ ಉತ್ಪನ್ನಗಳಿಗೆ ಉತ್ತೇಜನ ನೀಡಲು ಮೈಸೂರು ದಸರಾ ವಸ್ತುಪ್ರದರ್ಶನವನ್ನ 1880ರಲ್ಲಿ ಜೀವರಾಯನ ಕಟ್ಟೆ ಮೈದಾನದಲ್ಲಿ ಪ್ರಾರಂಭಿಸಿದರು ಎಂದು ಸ್ಮರಿಸಿದರು.

ಬೆಂಗಳೂರು ಅರಮನೆ, ಮೈಸೂರು ಮೃಗಾಲಯ, ಮೈಸೂರು ಮಹಾರಾಜ ಕಾಲೇಜು, ಮೈಸೂರು ಸಂಸ್ಕೃತ ಪಾಠಶಾಲೆ, ಲ್ಯಾನ್ಸ್‌ಡೌನ್ ಬಜಾರ್, ಲಾಲ್‌ಬಾಗ್ ಗಾಜಿನ ಅರಮನೆ ನಿರ್ಮಾಣ ಮಾಡಿದರು. 1881ರಲ್ಲಿ ಮೈಸೂರು ಕೌನ್ಸಿಲ್ ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿ ಆಧುನಿಕ ಪ್ರಜಾಪ್ರಭುತ್ವ ಶಾಸಕಾಂಗ ಸಂಸ್ಥೆಯಾಗಿ ಸ್ಥಾಪಿಸಿದರು. ಮಹಿಳೆಯರಿಗೆ ಸಮಾನ ಶಿಕ್ಷಣ ಜಾರಿಗೆ ತರುವಲ್ಲಿ ಶ್ರಮಿಸಿದರು. ರಂಗಾಚಾರ್ಲು, ಶೇಷಾದ್ರಿ ಅಯ್ಯರ್ ಅವರನ್ನು ದಿವಾನರಾಗಿ ನೇಮಿಸಿ ಹಲವಾರು ಅಭಿವೃದ್ಧಿ ಕಾರ್ಯಗಳಗೆ ನಾಂದಿ ಹಾಡಿದರು ಎಂದು ಹೇಳಿದರು.

ಸ್ವತಃ ಪಿಟೀಲು ವಾದಕರಾದ ಚಾಮರಾಜ ಒಡೆಯರ್ ಅವರು ಕಲೆ, ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡಿದ್ದರು. ವೀಣೆ ಸುಬ್ಬಣ್ಣ , ವೀಣೆ ಶಾಮಣ್ಣ, ಬಿಡಾರಾಂ ಕೃಷ್ಣಪ್ಪ, ವಾಸುದೇವಾಚಾರ್ ವೀಣೆ ಪದ್ಮನಾಭಯ್ಯ, ಮೈಸೂರು ಕರಿಗಿರಿರಾವ್ ಅವರನ್ನು ಸಾಂಸ್ಕೃತಿಕ ಲೋಕದ ಮುಖ್ಯವಾಹಿನಿಗೆ ಪರಿಚಯಿಸಿದರು ಎಂದರು.

ನಗರಪಾಲಿಕೆ ಅಧಿಕಾರಿಗಳು ಚಾಮರಾಜ ಒಡೆಯರ್ ಪ್ರತಿಮೆ ಶುಚಿಗೊಳಿಸಿ ಮಾಲಾರ್ಪಣೆ ಮಾಡಬೇಕಾಗಿತ್ತು. ಆದರೆ, ಈ ಬಗ್ಗೆ ಅವರು ಗಮನ ಹರಿಸಲಿಲ್ಲ. ಮುಂದಿನ ವರ್ಷದಲ್ಲಾದರೂ ನಗರಪಾಲಿಕೆಯಿಂದ ಚಾಮರಾಜ ಒಡೆಯರ್ ಜಯಂತಿ ಆಚರಿಸಬೇಕು ಹಾಗೂ ವೃತ್ತದ ಮುಂದೆ ಅವರ ಹೆಸರು ಹಾಗೂ ಸಾಧನೆಯನ್ನು ಬರೆಸಬೇಕು ಎಂದು ಎಂದು ಹೇಳಿದರು.

ಈ ಸಂದರ್ಭ ನಗರಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೃಷ್ಣರಾಜೇಂದ್ರ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಮೈಸೂರು ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ರಾಜೇಶ್ವರಿ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಅಜಯ್ ಶಾಸ್ತ್ರಿ, ಜಿ. ರಾಘವೇಂದ್ರ, ಓಸಮಾ ಖಾನ್, ಪ್ರಕಾಶ್ ಪ್ರಿಯದರ್ಶನ್, ಎನ್.ಎಸ್. ರಾಜೇಶ್, ನಾಗಬಸವಣ್ಣ, ಹೊಯ್ಸಳ, ರೋಹಿತ್ ಸಿಂಗ್, ಶಶಾಂಕ್, ಅಭಿಶೇಕ್, ಶರತ್, ಪಾಂಡು ನಾರಾಯಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net