ಮೈಸೂರಿನಲ್ಲಿ ಗಿನ್ನೆಸ್ ಯೋಗಾಥಾನ್‌ಗೆ ಸಿದ್ಧತೆ

3 (4)
ಗಿನ್ನೆಸ್ ಯೋಗಾಥಾನ್ ಕಾರ್ಯಕ್ರಮ ನಡೆಯುವ ನಗರದ ರೇಸ್‌ಕೋರ್ಸ್ ಮೈದಾನವನ್ನು ಉಪವಿಭಾಗಾಧಿಕಾರಿ ಕಮಲಾ ಬಾಯಿ ಪರಿಶೀಲಿಸಿದರು. ಡಾ.ಪುಷ್ಪಾ, ಗಣೇಶಕುಮಾರ್, ಡಾ.ಸುರೇಶ್, ಅಜಯ್ ಅರಸ್ ಇನ್ನಿತರರು ಇದ್ದರು.
Published on

ಮೈಸೂರು: ನಗರದ ರೇಸ್‌ಕೋರ್ಸ್ ಮೈದಾನದಲ್ಲಿ ‘ಗಿನ್ನೆಸ್ ಯೋಗಾಥಾನ್’ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.
ಗುರುವಾರ ಸ್ಥಳ ಪರಿಶೀಲನೆ ನಡೆಸಿ, ಈ ಬಗ್ಗೆ ಮಾಹಿತಿ ನೀಡಿದ ಉಪವಿಭಾಗಾಧಿಕಾರಿ ಕಮಲಾಬಾಯಿ, ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಮುಂದಿನ ತಿಂಗಳು ಯೋಗಾಥಾನ್-2022 ಆಯೋಜಿಸಲಾಗಿದೆ. ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವಂತೆ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈಗಾಗಲೇ ಮೈಸೂರು ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಗಿನ್ನೆಸ್ ದಾಖಲೆ ಬರೆದಿದೆ. ಈ ಬೃಹತ್ ಯೋಗಪ್ರದರ್ಶನ ಸಹ ಗಿನ್ನೆಸ್ ದಾಖಲೆಗೆ ಸೇರುವಂತೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಕೇಂದ್ರ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಹಲವು ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಯೋಗಾಸನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಯೋಗಾಸನ ಮಾಡುವವರಿಗೆ ಟಿ ಶರ್ಟ್ ಮತ್ತು ಮ್ಯಾಟ್ ನೀಡುವ ಸಂಬಂಧ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮೈಸೂರು ವಿಶ್ವವಿದ್ಯಾಲಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ವೈದ್ಯಕೀಯ, ತಾಂತ್ರಿಕ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ನೌಕರರು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಆಯುಷ್ ಇಲಾಖೆಯ ಡಾ.ಪುಷ್ಪಾ, ಎಂಆರ್‌ಸಿ ಅಧ್ಯಕ್ಷ ಗಣೇಶಕುಮಾರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಎಂಆರ್‌ಸಿ ಕಾರ್ಯದರ್ಶಿ ಅಜಯ್ ಅರಸ್ ಇದ್ದರು.

ಗಿನ್ನೆಸ್ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು www.yogathona2022.com ವೆಬ್‌ಸೈಟ್ ಹೋಗಿ ಯೋಗ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕು. 1 ಲಕ್ಷಕ್ಕೂ ಹೆಚ್ಚು ಜನರನ್ನು ನೋಂದಾಯಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಕಮಲಾಬಾಯಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net