ಮೈಸೂರಿನಲ್ಲಿ ಕುಂಟುತ್ತಾ ಸಾಗಿದೆ ಗ್ಯಾಸ್ ಪೈಪ್‌ಲೈನ್ ಯೋಜನೆ

download
Published on

ಆರ್. ಕೃಷ್ಣ ಮೈಸೂರು
ಮನೆಗಳಿಗೆ ನೇರ ಅಡುಗೆ ಅನಿಲ (ಗ್ಯಾಸ್) ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಯೋಜನೆ ಕುಂಟುತ್ತಾ ಸಾಗಿದ್ದು, ನಿಗದಿತ ಅವಧಿಯೊಳಗೆ ಮುಕ್ತಾಯಗೊಳ್ಳುವುದು ಅನುಮಾನವಾಗಿದೆ.
ನಗರದ ಪ್ರತಿ ಮನೆಗಳಿಗೆ ಕೊಳವೆ (ಪೈಪ್‌ಲೈನ್) ಮೂಲಕ ನೇರ ಸಂಪರ್ಕ ಕಲ್ಪಿಸಿ ಜನರಿಗೆ ತಡೆ ರಹಿತ ಅನಿಲ ನೀಡುವ ಯೋಜನೆಯ ಕಾಮಗಾರಿ ಆರಂಭಗೊಂಡಿದ್ದರೂ ವೇಗ ಪಡೆದುಕೊಂಡಿಲ್ಲ. ಹೀಗಾಗಿ ಎರಡು ವರ್ಷದಿಂದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆ ಮನೆಗೂ ಅನಿಲ ಸಂಪರ್ಕ ಪೂರೈಕೆ ಯೋಜನೆಗೆ ಮೈಸೂರನ್ನು ಸಹ ಆಯ್ಕೆ ಮಾಡಲಾಗಿತ್ತು. ಯೋಜನೆಯ ಅನುಷ್ಠಾನ ಜವಾಬ್ದಾರಿಯನ್ನು ಮೈಸೂರಿನಲ್ಲಿ ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿಗೆ ವಹಿಸಲಾಗಿದೆ.
ಬೆಂಗಳೂರು ಹಾಗೂ ಮಂಗಳೂರಿನ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮನೆ ಮನೆಗೆ ಪೈಪ್‌ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ. ಐದು ವರ್ಷಗಳಲ್ಲಿ ನಗರದಲ್ಲಿ ಸುಮಾರು 800 ಕಿ.ಮೀ.ನಷ್ಟು ಪೈಪ್‌ಲೈನ್ ಕಾಮಗಾರಿ ಅಳವಡಿಸುವ ಗುರಿ ಹೊಂದಲಾಗಿತ್ತು. 16,917 ಚದರ ಕಿ.ಮೀ. ವ್ಯಾಪ್ತಿಯನ್ನು ಪೈಪ್‌ಲೈನ್ ಅನಿಲ ಸಂಪರ್ಕ ವ್ಯಾಪ್ತಿಗೆ ತಂದು 3.75 ಲಕ್ಷ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿ ಹೊಂದಲಾಗಿದೆ. ಆದರೆ ಈಗ ಕೇವಲ 45 ಕಿ.ಮೀ. ಮಾತ್ರ ಪೈಪ್‌ಲೈನ್ ಕಾಮಗಾರಿ ನಡೆಸಲಾಗಿದೆ.
ಅಂದಾಜು 500 ಕೋಟಿ ರೂ. ವೆಚ್ಚದ ಈ ಯೋಜನೆಯ ಅನುಷ್ಠಾನದ ಬಗ್ಗೆ ಸಂಸದ ಪ್ರತಾಪ ಸಿಂಹ ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ಸ್ಥಳೀಯ ಶಾಸಕರು ಮತ್ತು ಪಾಲಿಕೆ ಸದಸ್ಯರ ವಿರೋಧದಿಂದ ಕಾಮಗಾರಿಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಬಳಿಕ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಿ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿತ್ತು.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ ಈ ವೇಳೆಗಾಗಲೇ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡು 50 ಸಾವಿರದಷ್ಟು ಮನೆಗಳಿಗೆ ನೇರ ಅನಿಲ ಸಂಪರ್ಕ ಕಲ್ಪಿಸಬೇಕಾಗಿತ್ತು. ಮೊದಲ ಹಂತವಾಗಿ ಹೆಬ್ಬಾಳು, ವಿಜಯನಗರ ಮತ್ತು ಲಕ್ಷ್ಮೀಕಾಂತ ನಗರ ಬಡಾವಣೆಗಳಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸಿ, ಬಹುತೇಕ ಮನೆಗಳಿಗೆ ಗ್ಯಾಸ್ ರೀಡಿಂಗ್ ಮೀಟರ್‌ಗಳನ್ನು ಸಹ ಅಳವಡಿಸಲಾಗಿದೆ.
ಅಲ್ಲದೆ ಮೂರು ವಾರ್ಡ್‌ಗಳ ವ್ಯಾಪ್ತಿಯಲ್ಲಿ 45 ಕಿ.ಮೀ. ಪೈಪ್‌ಲೈನ್ ಅಳವಡಿಸಿ, ರಿಂಗ್‌ರಸ್ತೆಯಲ್ಲಿ 27 ಕಿ.ಮೀ. ವ್ಯಾಪ್ತಿಯವರೆಗೆ ಪೈಪ್‌ಲೈನ್ ಕಾಮಗಾರಿ ನಡೆಸಿದೆ. ಇನ್ನೂ ಹೆಚ್ಚಿನ ಬಡಾವಣೆಗಳಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಸಬೇಕಾದ ಕಂಪನಿಯೂ ಕಾಮಗಾರಿ ತೀವ್ರಗೊಳಿಸುವಲ್ಲಿ ಆಸಕ್ತಿ ತೋರಿಲ್ಲ. ಇದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎನ್ನಲಾಗುತ್ತಿದೆ.

ಪ್ರಯೋಜನವೇನು?

ಮನೆಗಳಿಗೆ ನೇರ ಕೊಳವೆ ಮೂಲಕ ಸಂಪರ್ಕ ನೀಡುವುದರಿಂದ ಯಾವುದೇ ಅಡ್ಡಿ ಇಲ್ಲದೆ ನಿರಂತರವಾಗಿ ಅನಿಲ ಸಂಪರ್ಕ ಕಲ್ಪಿಸಬಹುದು. ಅಡುಗೆ ಅನಿಲದ ಬೆಲೆ ಕೂಡ ಕಡಿಮೆ ಇದ್ದು, ಅನಿಲ ವ್ಯರ್ಥವಾಗುವುದಿಲ್ಲ, ಸಿಲಿಂಡರ್ ಬುಕ್ ಮಾಡಿ ಕಾಯುವ, ಸಿಲಿಂಡರ್ ಇಡಲು ಜಾಗ ಇಲ್ಲ ಎನ್ನುವ ಸಂದರ್ಭಗಳು ಬರುವುದಿಲ್ಲ. ಫೈಪ್ ಮೂಲಕ ಹೋಗುವ ಗ್ಯಾಸ್ ಪರಿಸರಕ್ಕೆ ಹಾನಿಕಾರವಲ್ಲ. ಯಾವುದೇ ಸಂದರ್ಭದಲ್ಲೂ ಅನಿಲ ಸೋರಿಕೆಯಾಗದಂತೆ ಸುಮಾರು 1.2 ಮೀಟರ್‌ನಷ್ಟು ಭೂಮಿ ಅಗೆದು ಉಕ್ಕಿನ ಹಾಗೂ ಮೀಡಿಯಂ ಡೆನ್ಸಿಟಿ ಪಾಲಿಥಲೀನ್(ಎಂಡಿಪಿ ಪೈಪ್) ಅಳವಡಿಸಲಾಗುತ್ತದೆ. ಅಲ್ಲದೆ ಪ್ರತಿದಿನ ಅನಿಲ ಪೂರೈಕೆಯಾಗುವ ಪೈಪ್‌ಲೈನ್ ಮೇಲೆ ನಿಗಾ ವಹಿಸಲಾಗುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿದಲ್ಲಿ ವಾಲ್‌ಗಳ ಮೂಲಕ ಅನಿಲ ಪೂರೈಕೆಯಾಗುವುದನ್ನು ನಿಲ್ಲಿಸಬಹುದು.

ತ್ವರಿತವಾಗಿ ಪೂರ್ಣಗೊಳ್ಳಿಸಲು ನಿರ್ದೇಶನ
ಸಂಸದ ಪ್ರತಾಪಸಿಂಹ ಅವರು ಆಸಕ್ತಿ ವಹಿಸಿ ಮನೆ, ಮನೆಗೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್‌ಲೈನ್ ಯೋಜನೆ ಜಾರಿಗೊಳಿಸಿದ್ದರು. ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಸುವಂತೆ ಕಂಪನಿಗೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಆರಂಭದಲ್ಲಿ ತ್ವರಿತವಾಗಿ ನಡೆಯುತ್ತಿದ್ದ ಕಾಮಗಾರಿ ಈಗ ಮಂದಗತಿಯಲ್ಲಿ ಸಾಗಿದೆ. ಇದರಿಂದ ಬೇರೆ ಕಾಮಗಾರಿಗಳಿಗೂ ಅಡ್ಡಿ ಆಗುವುದರಿಂದ ತ್ವರಿತವಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net