ಮೈಸೂರಿನಲ್ಲಿ ಕಾರ್ಮಿಕರ ಪ್ರತಿಭಟನೆ

17
Published on

ಮೈಸೂರು: ಕನಿಷ್ಠ ಕೂಲಿ ಕಾಯ್ದೆಯಡಿ ವೇತನ ಪಾವತಿಸದೆ ಏಷಿಯನ್ ಪೇಂಟ್ಸ್ ಬೆಳಗೊಳ ಶಾಖೆ ಮೋಸ ಮಾಡಿದೆ ಎಂದು ಆರೋಪಿಸಿ ಐಎನ್‌ಟಿಯುಸಿ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಬಿವಿಜಿ ಇಂಡಿಯಾ ಲಿಮಿಟೆಡ್ ಏಜೆನ್ಸಿಯ ಮುಖಾಂತರ ಕಾರ್ಮಿಕರು ಹೊರಗುತ್ತಿಗೆಯಲ್ಲಿ ಕಳೆದ ಸೆಪ್ಟೆಂಬರ್‌ನಿಂದ ಕಾರ್ಮಿಕರು ಈ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹ್ಯಾಂಡ್ ವಾಷ್, ಫ್ಲೋರ್ ಕ್ಲೀನರ್, ಟಾಯ್ಲೆಟ್ ಕ್ಲೀನರ್‌ಗೆ ಸೇರಿದ ಉತ್ಪನ್ನಗಳನ್ನು ಉತ್ಪಾದಿಸುವ ಈ ಕಾರ್ಖಾನೆಯಲ್ಲಿ ವಿವಿಧ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಕೆಮಿಕಲ್ ಫರ್ಟಿಲೈಜರ್ ಫೆಸ್ಟಿಸೈಡ್ ವಲಯದ ಕೌಶಲ ಕೆಲಸಕ್ಕೆ 14,648 ರೂ. ಕನಿಷ್ಠ ವೇತನ ನೀಡಬೇಕೆಂದು ಸರ್ಕಾರಿ ಆದೇಶವಿದೆ. ಆದರೆ, ಬರೀ 11,857 ಸಂಬಳ ಪಾವತಿಸಲಾಗುತ್ತಿದೆ ಎಂದು ದೂರಿದರು.
ಇಎಸ್‌ಐ ಕಾರ್ಡ್ ಸಮರ್ಪಕವಾಗಿ ವಿತರಿಸಿಲ್ಲ. ಹಾನಿಕಾರಕ ಕೆಮಿಕಲ್ಸ್‌ಗಳ ಸಂಪರ್ಕಕ್ಕೆ ಬರುವ ಕಾರ್ಮಿಕರಿಗೆ ಕಳಪೆ ರಕ್ಷಾ ಪರಿಕರಗಳನ್ನು ನೀಡಲಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗಿದೆ. ಆದರೆ ಆಡಳಿತ ಮಂಡಳಿ ಬೇಜವಾಬ್ದಾರಿ ಉತ್ತರ ನೀಡಲಾಗಿದೆ ಎಂದು ಆರೋಪಿಸಿದರು. ತಕ್ಷಣ ಬೇಡಿಕೆ ಈಡೇರಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು. ಎಂ.ಅನಿಲ್‌ಕುಮಾರ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net