ಮೈಸೂರಿನಲ್ಲಿ ಕಲಾಭೂಮಿ ಪ್ರತಿಷ್ಠಾನಕ್ಕೆ ಚಾಲನೆ

24
Published on

ಮೈಸೂರು: ಸಿನಿಮಾ, ನಾಟಕ ಹಾಗೂ ಲಲಿತಕಲೆ ತರಬೇತಿಯ ಕಲಾಭೂಮಿ ಪ್ರತಿಷ್ಠಾನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಉದ್ಘಾಟಿಸಿದರು.
ಹಿರಿಯ ನಟರಾದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಜೈಜಗದೀಶ್ ಮಾತನಾಡಿ, ಯಾವುದೇ ಸಂಘ, ಸಂಸ್ಥೆಗಳನ್ನು ಆರಂಭಿಸುವುದು ಸುಲಭದ ಕೆಲಸವಲ್ಲ. ತರಬೇತಿ ಸಂಸ್ಥೆ ಆರಂಭಿಸಲು ಹಣ, ಜನಸಂಪರ್ಕ ಇರಬೇಕು. ಹಲವು ಪ್ರಕಾರಗಳಲ್ಲಿ ತರಬೇತಿ ನೀಡುವ ಸಂಸ್ಥೆ ಅವಶ್ಯಕತೆ ಇದ್ದು, ವಾಣಿಜ್ಯ ಮಂಡಳಿಯಿಂದ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಯಾವುದಾದರೂ ಕಲಾ ಸಂಸ್ಥೆ ಸ್ಥಾಪನೆ ಆದರೆ ನಮ್ಮ ಕಲೆ, ಸಂಸ್ಕೃತಿ ಪ್ರತಿಬಿಂಬಿಸುತ್ತದೆ. ಕೆಲವು ಸಂಸ್ಥೆಗಳು ಯಾವುದಾದರು ಒಂದು ಕಲಾ ಪ್ರಕಾರಕ್ಕೆ ಸೀಮಿತವಾದರೆ ಈಗ ಉದ್ಘಾಟನೆಗೊಂಡಿರುವ ಕಲಾಭೂಮಿ ಪ್ರತಿಷ್ಠಾನ, ಸಿನಿಮಾ, ನಾಟಕ ಹಾಗೂ ಲಲಿತಕಲೆಯನ್ನು ಕಲಿಸುವುದು ವಿಶೇಷವಾಗಿದೆ. ಇಂತಹ ಸಂಸ್ಥೆಗಳಲ್ಲಿ ಜ್ಞಾನಾರ್ಜನೆ ಆಗುವ ಕೇಂದ್ರವಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಟ ಶಂಕರ್ ಅಶ್ವಥ್, ಪೊಲೀಸ್ ಅಧಿಕಾರಿ ಡಾ.ಬಿ.ಟಿ. ಕವಿತಾ, ಸಮಾಜ ಸೇವಕಿ ಪ್ರೇಮಾಬೋಧಿ, ರಂಗಭೂಮಿ ಕಲಾವಿದರಾದ ಮಂಜುಸ್ವಾಮಿ, ಗಿರೀಶ್ ಮಾಚಳ್ಳಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಲಯನ್ಸ್ ಕ್ಲಬ್ ಮೈಸೂರು ಬಾಂಧವ್ಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿರ್ಮಾಪಕ ಎಂ.ಎನ್. ಕುಮಾರ್, ಶಿಲ್ಪಾ ಶ್ರೀನಿವಾಸ್, ಟಿ.ಪಿ. ಸಿದ್ದರಾಜು, ಕುಶಾಲ್‌ಗೌಡ, ಸಂಸ್ಥೆಯ ಆಸ್ಕರ್‌ಕೃಷ್ಣ, ದೇವಜನ ಗೀತಾ ಮೋಂಟಡ್ಕ, ಡಾ. ಕೃಷ್ಣಮೂರ್ತಿ ಚಮರಂ, ಎಸ್.ಎಂ. ಪಾಟೀಲ್, ಬಿ.ಎ. ಮಧು, ಎಸ್.ಡಿ. ಅರವಿಂದ್, ಸತ್ಯಲಿಂಗರಾಜು, ವಿಶೃತ್‌ನಾಯಕ್, ತೃಪ್ತಿ ಅಭಿಕರ್, ಸಿದ್ದು ಪೂರ್ಣಚಂದ್ರ, ರೋಹಿತ್ ರಮಣ, ಪ್ರಶಾಂತ್ ಅಂಕಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net