ಮೈಸೂರಿನಲ್ಲಿ ಕರೊನಾ ನಿಯಂತ್ರಣ, ಗಾಭರಿ ಬೇಡ: ಡಿಸಿ

18
Published on

ಮೈಸೂರು: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿ ಇದೆ. ಸಾರ್ವಜನಿಕರು ಗಾಭರಿಗೊಳ್ಳುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ವಿದೇಶದಲ್ಲಿ ಕರೊನಾ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಹರೋಟಿಯಲ್ಲಿ ಇದೆ.  ಪ್ರಸ್ತುತ 4 ಪಾಸಿಟಿವ್ ಪ್ರಕರಣಗಳು ಮಾತ್ರ ಇವೆ. ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ರೋಗ ತಡೆಗಟ್ಟಲು ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲ್ಲ. ಆದರೆ, ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ಮನವಿ ಮಾಡಲಿದ್ದೇವೆ. ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿ, ಬಸ್, ರೈಲು, ವಿಮಾನಯಾನ ಸಂದರ್ಭಗಳಲ್ಲಿ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಸ್ವಯಂಪ್ರೇರಣೆಯಿಂದ ಸಾರ್ವಜನಿಕರು ಮಾಸ್ಕ್ ಧಾರಣೆ ಮಾಡಬೇಕು ಎಂದರು.

ಕರೊನಾ ತಡೆಗಟ್ಟಲು ಅಗತ್ಯ ಮುನ್ನೆಚ್ಚಿಕಾ ಕ್ರಮ ವಹಿಸಲಾಗಿದೆ. ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ ಸೂಚಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 5 ವೆಂಟಿಲೇಟರ್ ಹಾಸಿಗೆ, ಜಿಲ್ಲಾಸ್ಪತ್ರೆಯಲ್ಲಿ 50 ವೆಂಟಿಲೇಟರ್ ಹಾಸಿಗೆ, ಕೆಆರ್ ಆಸ್ಪತ್ರೆಯಲ್ಲಿ 50 ಹಾಸಿಗೆ ಮೀಸಲಿಡುವಂತೆ ನಿರ್ದೇಶಿಸಲಾಗಿದೆ. ಆಮ್ಲಜನಕ ಘಟಕ ಸುಸ್ಥಿತಿಯಲ್ಲಿರುವ ಬಗ್ಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಸದ್ಯಕ್ಕೆ ಪ್ರತಿ ದಿನ ಜಿಲ್ಲೆಯಲ್ಲಿ 150 ಕೋವಿಡ್ ಪರೀಕ್ಷೆಗಳಾಗುತ್ತಿವೆ. ಈ ಪ್ರಮಾಣವನ್ನು ನಾಳೆಯಿಂದಲೇ 400ಕ್ಕೆ ಏರಿಕೆ ಮಾಡಲಾಗುವುದು. ತೀವ್ರ ನೆಗಡಿ, ಕೆಮ್ಮು, ಜ್ವರದಿಂದ (ಐಎಲ್ಐ/ಸಾರಿ) ಬಳಲುತ್ತಿರುವವರು ಪರೀಕ್ಷೆಗೆ ಒಳಪಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net