

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ಮಂಗಳವಾರ ಕನ್ನಡ ಕಂಪು ಪಸರಿಸಿತು.
ಕರೊನಾ ಕಾರ್ಮೋಡ ಕರಗಿದ ಬಳಿಕ ಕನ್ನಡ ರಾಜ್ಯೋತ್ಸವ ಕಳೆಗಟ್ಟಿ ಹಳೆಯ ವೈಭವವನ್ನು ಪಡೆದುಕೊಂಡಿತು. ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರು.
ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಅಂಗಳದಲ್ಲಿ ಜಿಲ್ಲಾಡಳಿತ ಸಿದ್ಧಪಡಿಸಿದ್ದ ಸಭಾ ವೇದಿಕೆಯಲ್ಲಿ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್ ಬ್ಯಾಂಡ್‌ನಿಂದ ರಾಷ್ಟ್ರಗೀತೆ ಮತ್ತು ನಾಡಗೀತೆ ಮೊಳಗಿತು.
ಆಕರ್ಷಕ ಪಥ ಸಂಚಲನ :
ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ನಾಗರಿಕ ಪಡೆ, ಮಹಿಳಾ ಪೊಲೀಸ್ ಪಡೆ, ಅಶ್ವದಳ, ಅಗ್ನಿಶಾಮಕ ದಳ, ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ಇಲ್ಲಿಂದ ಹೊರಟ ಭುವನೇಶ್ವರಿ ಚಿತ್ರದ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಹಾದು ವಾಪಸ್ ಪುರಭವನ ತಲುಪಿತು. ಈ ವೇಳೆ ವಿವಿಧ ಕಲಾತಂಡಗಳ ಮೆರವಣಿಗೆ ಗಮನ ಸೆಳೆಯಿತು. ನಂದಿಧ್ವಜ, ಕಲಾತಂಡಗಳು ಮೆರುಗು ನೀಡಿದವು.
ವಿದ್ಯಾರ್ಥಿಗಳಿಗೆ ಗೌರವ:
2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಗ್ರ 3ರೊಳಗೆ ರ‌್ಯಾಂಕ್ ಹಂಚಿಕೊಂಡ ಬನ್ನೂರು ಹೋಬಳಿಯ ಮೆಣಸಿಕ್ಯಾತನಹಳ್ಳಿ ಸರ್ಕಾರಿ ಶಾಲೆಯ ಜಿ.ಎಸ್. ಹರ್ಷಿತಾ, ಹುಣಸೂರು ತಾಲೂಕಿನ ಮನುಗನಹಳ್ಳಿ ಸರ್ಕಾರಿ ಶಾಲೆಯ ಸಿ.ಆರ್. ಆದಿತ್ಯ, ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಸರ್ಕಾರಿ ಶಾಲೆಯ ಎಸ್.ಎಂ. ಸಿಂಚನಾ, ಇದೇ ಶಾಲೆಯ ಎಂ.ಕೆ. ಪ್ರಾರ್ಥನಾ, ನಂಜನಗೂಡು ತಾಲೂಕಿನ ಕಪ್ಪಸೋಗೆ ಸರ್ಕಾರಿ ಶಾಲೆಯ ರಮ್ಯಾ ಅವರಿಗೆ ಲ್ಯಾಪ್‌ಟಾಪ್ ನೀಡಲಾಯಿತು.
ನಗದು ಬಹುಮಾನ
ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಅಧಿಕ ಅಂಕ ಪಡೆದ ನಂಜನಗೂಡು ತಾಲೂಕಿನ ಬಿದರಗೂಡು ಸರ್ಕಾರಿ ಶಾಲೆಯ ಅರ್ಚನಾ, ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಸರ್ಕಾರಿ ಶಾಲೆಯ ಪಿ.ಎಂ.ವರ್ಷಿಣಿ, ಹುಣಸೂರು ತಾಲೂಕಿನ ಹರವೆ ಸರ್ಕಾರಿ ಶಾಲೆಯ ಕೆ.ಜೆ.ಸ್ನೇಹಾ, ಮೈಸೂರು ತಾಲೂಕಿನ ಗುಂಗ್ರಾಲ್‌ಛತ್ರ ಸರ್ಕಾರಿ ಶಾಲೆಯ ಮಹದೇವಮ್ಮ, ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಸರ್ಕಾರಿ ಶಾಲೆಯ ಎಸ್.ನಯನ್ ಅವರಿಗೆ ನಗದು ಬಹುಮಾನ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 45 ಜನರನ್ನು ಸನ್ಮಾನಿಸಲಾಯಿತು.