

ಮೈಸೂರು: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ಸುದ್ದಿವಾಹಿನಿ ನೇತೃತ್ವದಲ್ಲಿ ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ಎಜುಕೇಷನ್ ಎಕ್ಸ್‌ಪೋ-2023’ ಮೇಳಕ್ಕೆ ಜೂ.10ರಂದು ಚಾಲನೆ ದೊರೆಯಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಮೇಳಕ್ಕೆ ಭೇಟಿ ನೀಡಿ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು.
ಶೈಕ್ಷಣಿಕ ಮೇಳಕ್ಕೆ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಜೆಎಸ್‌ಎಸ್ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಉಜಿರೆಯ ಎಸ್‌ಡಿಎಂ ಎಜುಕೇಷನ್ ಸೊಸೈಟಿ ಸಹ ಪ್ರಾಯೋಜಕತ್ವ ನೀಡಿವೆ.
ಶನಿವಾರ ಬೆಳಗ್ಗೆ 10ಕ್ಕೆ ಶೈಕ್ಷಣಿಕ ಮೇಳ ಆರಂಭವಾಗಲಿದ್ದು, ಅದ್ದೂರಿಯಾಗಿ ನಡೆಯಲಿರುವ ಶಿಕ್ಷಣ ಉತ್ಸವವು ಈ ಎರಡು ದಿನವೂ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ತೆರೆದಿರಲಿದೆ. ಸರ್ವರಿಗೂ ಉಚಿತ ಪ್ರವೇಶವಿದ್ದು, ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು ಇಲ್ಲಿ ಇರಲಿವೆ.
ಜೂ.10ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮೇಳವನ್ನು ಉದ್ಘಾಟಿಸುವರು. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ತಂತ್ರಜ್ಞಾನ ಅಕಾಡೆಮಿಯ ಕುಲಸಚಿವ ಬಿ.ಮಂಜುನಾಥ ಅಧ್ಯಕ್ಷತೆ ವಹಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿ ನಿರ್ದೇಶಕಿ ಭಾರತಿ, ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ತಮ್ಮ ಅಧ್ಯಯನಕ್ಕೆ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಶೈಕ್ಷಣಿಕ ಮೇಳ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಕುತೂಹಲಭರಿತ ವಿದ್ಯಾರ್ಥಿಗಳು, ಪಾಲಕರಿಗೆ ಒಂದೇ ಸೂರಿನಡಿ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಸೌಲಭ್ಯಗಳ ಭರಪೂರ ಮಾಹಿತಿ ಸಿಗಲಿದೆ.
ಮೇಳವು ಮುಂದಿನ ಕಲಿಕೆಗೆ ಕೈಗನ್ನಡಿ. ವಿದ್ಯಾರ್ಥಿಗಳು ಯಾವ ಶಾಲೆಗೆ ಸೇರಬೇಕು ಎಂಬ ಮಾಹಿತಿ ಇಲ್ಲಿ ದೊರೆಯಲಿದೆ. ಜತೆಗೆ ಪದವಿ ಪೂರ್ವ ಕಾಲೇಜು, ಪದವಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವ ಕೋರ್ಸ್ ಮತ್ತು ಸೌಲಭ್ಯಗಳಿವೆ, ಪ್ರವೇಶ ಪ್ರಕ್ರಿಯೆ ಹೇಗೆ ಎಂಬುದರ ಮಾಹಿತಿಯೂ ದೊರೆಯಲಿದೆ. ಮೈಸೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಶೈಕ್ಷಣಿಕ ಮಾಹಿತಿ ಪಡೆಯಲು ಈ ಮೇಳ ವರದಾನವಾಗಿದೆ.
ಮುಖ್ಯವಾಗಿ ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳು, ವೈದ್ಯಕೀಯ ವಿವಿಗಳು, ಸಂಗೀತ ವಿವಿ, ವೈದ್ಯಕೀಯ ಕಾಲೇಜುಗಳು, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಫ್ಯಾಷನ್ ಡಿಸೈನ್, ಆಯುರ್ವೇದ ಕಾಲೇಜುಗಳು, ಆರ್ಕಿಟೆಕ್ಚರ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳು ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಲಿದ್ದಾರೆ.