

ಮೈಸೂರು: ರಂಜಾನ್ ಮಾಸಾಚರಣೆ ಅಂತಿಮ ದಿನವಾದ ಸೋಮವಾರ ನಗರದಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಹಸಿವು ಮತ್ತು ದಾನ ಧರ್ಮದ ಮಹತ್ವವನ್ನು ಸಾರುವ ಈದ್ ಹಬ್ಬವನ್ನು ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಹಸ್ರಾರು ಮುಸ್ಲಿಮರು ನಗರದ ಮಸೀದಿಗಳು ಮತ್ತು ಈದ್ಗಾ ಮೈದಾನದಲ್ಲಿ ಆಚರಣೆ ಮಾಡಿದರು.
29 ದಿನಗಳ ಉಪವಾಸದ ನಂತರ ಭಾನುವಾರ ರಾತ್ರಿ ಚಂದ್ರದರ್ಶನವಾದ ಕಾರಣ ನಿಯಮದಂತೆ ಸೋಮವಾರ ಬೆಳಗ್ಗೆ ಈದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ಇಸ್ಲಾಂ ಧರ್ಮಗುರುಗಳು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ತಿಲಕನಗರ, ರಾಜೀವ್‌ನಗರ ಮತ್ತು ಗೌಸಿಯಾನಗರದ ಈದ್ಗಾ ಮೈದಾನಗಳು ಸೇರಿದಂತೆ ವಿವಿಧ ಮಸೀದಿಗಳಲ್ಲೂ ಹಬ್ಬ ಕಳೆಗಟ್ಟಿತ್ತು.
ಸುಮಾರು 5 ಸಾವಿರಕ್ಕೂ ಹೆಚ್ಚು ಮುಸ್ಲಿಮರು ಗೌಸಿಯಾನಗರ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಿದರು. ಶ್ರೀರಂಗಪಟ್ಟಣದ ಜಾಮೀಯಾ ಟೀಪ್ಪು ಅರೇಬಿಕ್ ಮದ್ರಸಾ ಕಾಲೇಜಿನ ಪ್ರಾಂಶುಪಾಲ ಮುಫ್ತಿ ಸಜ್ಜಾದ್ ಹುಸೇನ್ ವಿಶೇಷ ಪ್ರಾರ್ಥನೆ ನೇತೃತ್ವ ವಹಿಸಿದ್ದರು. ಜಗತ್ತಿನಲ್ಲಿ ಮತ್ತು ವಿಶೇಷವಾಗಿ ಭಾರತದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.
ಈದ್ಗಾ ಮೈದಾನಕ್ಕೆ ಬಂದಿದ್ದ ಎಲ್ಲರಿಗೂ ತಂಪುಪಾನೀಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜಮಾತ್ ರಝಾಯೇ ಮುಸ್ತಫಾ ಮದ್ರಸಾದ ನೂರಾರು ಸ್ವಯಂ ಸೇವಕರು ನಮಾಜ್ ಸಂದರ್ಭದಲ್ಲಿ ಯಾವುದೇ ನೂಕು ನುಗ್ಗಲು ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದರು. ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
ಮೈಸೂರು ಮಹಾನಗರ ಪಾಲಿಕೆಯಿಂದ ಶುಚಿತ್ವ ಕಾಪಾಡಲು ಪೌರಕಾರ್ಮಿಕರ ನಿಯೋಜಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಈದ್ ಹಬ್ಬ ಸಂದರ್ಭದಲ್ಲಿ ಪ್ರತಿಭಟನೆಯೂ ನಡೆಯಿತು. ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಹಲವರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಮಾಜ್ ಮಾಡಿದರೆ ಮತ್ತೆ ಕೆಲವರು, ಮಸೂದೆಯನ್ನು ವಿರೋಧಿಸಿ ಭಿತ್ತಿ ಚಿತ್ರಗಳನ್ನು ಹಿಡಿದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು.