ಮೈಸೂರಿನಲ್ಲಿ ಆಟೋಗೆ ರೈಲು ಡಿಕ್ಕಿ : ಮೂವರಿಗೆ ಗಾಯ

sadesh_1
Published on

ಮೈಸೂರು: ನಗರದ ಹೊರ ವಲಯದ ಇಲವಾದ ರೈಲ್ವೆ ಲೆವಲ್ ಕ್ರಾಸ್‌ನಲ್ಲಿ ರೈಲು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

ಮೈಸೂರಿನ ಇಲವಾಲ ಹೋಬಳಿಯ ಮಲ್ಲೇಗೌಡನ ಕೊಪ್ಪಲು ಗ್ರಾಮದ ರೈಲ್ವೆ ಗೇಟ್‌ನಲ್ಲಿ ಈ ದುರ್ಘಟನೆ ರಾತ್ರಿ ನಡೆದಿದೆ. ರೈಲ್ವೆ ಲೆವಲ್ ಕ್ರಾಸ್‌ನಲ್ಲಿ ಗೇಟ್ ಹಾಕುವ ಸಿಬ್ಬಂದಿಯ ನಿರ್ಲಕ್ಷೃದಿಂದ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸಿದರು. ಸಿಬ್ಬಂದಿ ಮೊಬೈಲ್ ನೋಡುತ್ತಾ ಮೈ ಮರೆತ ಹಿನ್ನೆಲೆಯಲ್ಲಿ ಗೇಟ್ ಹಾಕುವುದು ತಡವಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೈಲು ಆಗಮಿಸುತ್ತಿರುವುದು ತಿಳಿಯದ ಆಟೋ ಚಾಲಕ ಎಂದಿನಂತೆ ರಸ್ತೆ ದಾಟುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ಆಟೋ ಚಾಲಕ ಹಾಗೂ ಇಬ್ಬರು ಮಕ್ಕಳು ಗಾಯಗೊಂಡರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೇಟ್ ಹಾಕುತ್ತಿದ್ದ ಸಂದರ್ಭ ಆಟೋ ರಿಕ್ಷಾ ದಿಢೀರಾಗಿ ನುಗ್ಗಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಿಬ್ಬಂದಿ ಹೇಳಿಕೊಂಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿದೆ. ಘಟನೆಯಿಂದ ತೀವ್ರ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಅರ್ಧ ಗಂಟೆ ರೈಲು ಸಂಚಾರ ಸ್ಥಗಿತಗೊಂಡಿತು. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಸಮಾಧಾನಗೊಳಿಸಿ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net