ಮೈಸೂರಿನಲ್ಲಿ ಆಟ ನಿಲ್ಲಿಸಿದ ಥಿಯೇಟರ್‌ಗಳು...!

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಶಾಂತಲಾ, ಲಕ್ಷ್ಮೀ, ಸರಸ್ವತಿ ಕಣ್ಮರೆ ಬಳಿಕ ಇದೀಗ ಸ್ಟರ್ಲಿಂಗ್-ಸ್ಕೈಲೈನ್ ಸಹ ಮಾಯ..!

ಒಂದು ಕಾಲದಲ್ಲಿ ಸಿನಿ ನಗರಿಯಾಗಿದ್ದ ಮೈಸೂರಿನಲ್ಲಿ ಒಂದೊಂದಾಗಿ ಕಣ್ಣು ಮುಚ್ಚಿರುವ ಚಿತ್ರಮಂದಿರಗಳ ಸದ್ಯದ ಪಟ್ಟಿ ಇದು.

ಸಿನಿಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿ, ನಿರ್ಮಾಪಕರು, ಕಲಾವಿದರ ಬೆಳವಣಿಗೆಗೆ ನೀರೆರೆದ ನಗರದ ಥಿಯೇಟರ್‌ಗಳು ಕಾಲಗರ್ಭ ಸೇರಿಕೊಳ್ಳುತ್ತಿವೆ.

ಇದರಿಂದಾಗಿ ‘ಏಕಪರದೆ ಚಿತ್ರ ಪರಂಪರೆ’ ನಿಧಾನಗತಿಯಲ್ಲಿ ಮರೆಯಾಗುತ್ತಿದೆ. ಮಲ್ಟಿಪ್ಲೆಕ್ಸ್ ಸಂಸ್ಕೃತಿ ಮುನ್ನೆಲೆಗೆ ಬರುತ್ತಿದೆ.

11 ಥಿಯೇಟರ್‌ಗಳು ಬಂದ್:

ಬೆಂಗಳೂರು ನಂತರ ಹೆಚ್ಚು ಸಿನಿಮಾ ಮಂದಿರ ಇದ್ದ ಮೈಸೂರಿನಲ್ಲಿ ಬರೀ 10 ಸಿಂಗಲ್ ಸ್ಟ್ರೀನ್ ಚಿತ್ರಮಂದಿರಗಳಿವೆ. ಕೆಲ ವರ್ಷಗಳಲ್ಲೇ ಬರೋಬ್ಬರಿ 11 ಥಿಯೇಟರ್‌ಗಳು ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿ ಇತಿಹಾಸ ಪುಟ ಸೇರಿಕೊಂಡಿವೆ. ಪ್ರಭಾ, ಪದ್ಮಾ ಚಿತ್ರಮಂದಿರ ತಿಂಗಳಿನಲ್ಲಿ ನಾಲ್ಕೈದು ದಿನ ಬಾಗಿಲು ಹಾಕಿರುತ್ತದೆ. ಇವುಗಳೆರಡು ಸಹ ಸ್ಥಗಿತಗೊಳ್ಳುವತ್ತ ಮುಖ ಮಾಡುತ್ತಿವೆ.

ಈಗಿರುವ ಚಿತ್ರಮಂದಿರಗಳೂ ಬಡವಾಗಿ ಹೋಗಿವೆ. ತೆರಿಗೆ ಹೊರೆ, ನಿರ್ವಹಣೆ ಕೊರತೆ, ಹಣಕಾಸಿನ ಸಮಸ್ಯೆ ಸೇರಿದಂತೆ ವಿವಿಧ ಕಾರಣಕ್ಕೆ ಇವುಗಳು ಸಂಕಷ್ಟದ ಅಡಕತ್ತರಿಯಲ್ಲಿ ಸಾಗಿವೆ. ಅಸ್ತಿತ್ವ ಉಳಿಸಿಕೊಳ್ಳಲು ಎದೆಯುಸಿರು ಬಿಡುತ್ತಿವೆ. ಸಂಧ್ಯಾಕಾಲದತ್ತ ಮುಖ ಮಾಡಿರುವ ಇವುಗಳು ಯಾವಾಗ ಕೊನೆಯುಸಿರೆಳೆಯುತ್ತವೋ ಗೊತ್ತಿಲ್ಲ!

ನೆಲಸಮವಾದ ಸ್ಟರ್ಲಿಂಗ್-ಸ್ಕೈಲೈನ್:

ವಿದ್ಯಾರಣ್ಯಪುರಂನ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಚಿತ್ರಮಂದಿರ ಇನ್ನೂ ನೆನಪು ಅಷ್ಟೇ. ಕಟ್ಟಡವನ್ನು ನೆಲಸಮಗೊಳಿಸುವ ಕೆಲಸ ಭರದಿಂದ ಸಾಗಿದ್ದು, ಕೆಲ ದಿನಗಳಲ್ಲೇ ಚಿತ್ರಮಂದಿರದ ಗುರುತು ಸಹ ಇಲ್ಲದಂತಾಗಲಿದೆ.

ಸಿನಿರಸಿಕರಿಗೆ ಬಹುಭಾಷೆಗಳ ಸಿನಿಮಾಗಳ ಮನರಂಜನೆ ನೀಡಿದ ಹೆಗ್ಗಳಿಗೆ ಈ ಚಿತ್ರಮಂದಿರಗಳಿಗೆ ಇದೆ. ಅದರಲ್ಲೂ ಹಾಲಿವುಡ್‌ನ ಜನಪ್ರಿಯ ಇಂಗ್ಲಿಷ್ ಚಲನಚಿತ್ರಗಳ ಪ್ರದರ್ಶನದಿಂದಾಗಿಯೇ ಸ್ಟಲಿರ್ಂಗ್ ಹೆಚ್ಚು ಗಮನ ಸೆಳೆದಿತ್ತು. ಆ ಚಿತ್ರಮಂದಿರದ ಆವರಣಕ್ಕೆ ಹೊಂದಿಕೊಂಡಂತೆಯೇ ಸ್ಕೈಲೈನ್ ಮತ್ತೊಂದು ಕಿರುಚಿತ್ರಮಂದಿರವೂ ಇತ್ತು. ಈ ಅವಳಿ ಸಿನಿಪರದೆಗಳು ದಶಕಗಳ ಕಾಲ ಸಾವಿರಾರು ಚಿತ್ರ ಪ್ರದರ್ಶನಗಳಿಗೆ ಸಾಕ್ಷಿಯಾಗಿದ್ದವು. ಕೆಲ ವರ್ಷಗಳ ಹಿಂದೆಯೇ ಎರಡೂ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿದ್ದವು. ಇದೀಗ ಕಟ್ಟಡ ತೆರವು ಕಾಮಗಾರಿ ನಡೆದಿದೆ. ಮೈಸೂರಿನಲ್ಲಿ ಈಗಾಗಲೇ ಸಾಲು ಸಾಲು ಏಕಪರದೆ ಚಿತ್ರಮಂದಿರಗಳು ನೆಲಕಚ್ಚಿದ್ದು, ಅವುಗಳ ಸಾಲಿಗೆ ಈ ಎರಡೂ ಚಿತ್ರಮಂದಿರಗಳು ಹೊಸ ಸೇರ್ಪಡೆಯಷ್ಟೇ.

ರಿಜೆನ್ಸಿ, ರಣಜಿತ್, ಅಪೇರಾ ಮಾಯ!

ಹಿಂದೆ ಹಾಲಿವುಡ್ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದ ನಜರ್‌ಬಾದ್‌ನ ‘ರಿಜೆನ್ಸಿ’ ಬಾಗಿಲು ಮುಚ್ಚಿ ಹಲವು ವರ್ಷಗಳೇ ಉರುಳಿವೆ. ಆ ಜಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ತಲೆ ಎತ್ತಿದೆ. ವಿದ್ಯಾರಣ್ಯ, ಗಣೇಶ, ಚಾಮುಂಡೇಶ್ವರಿ ಮತ್ತು ಗೋಕುಲ್ ಚಿತ್ರಮಂದಿರ ಬಂದ್ ಆಗಿ ಹಲವು ಕಾಲವಾಗಿದೆ. ರಣಜಿತ್ ನೆಲಸಮಗೊಂಡು ದಶಕ ಕಳೆದು ಹೋಗಿದೆ. ಅದರ ಪಕ್ಕವೇ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದೆ. ಮಲ್ಟಿಫ್ಲೆಕ್ಸ್ ಚಿತ್ರಮಂದಿರವೂ ಇದೆ. ಹರ್ಷ ರಸ್ತೆಯಲ್ಲಿದ್ದ ‘ಅಪೇರಾ’ ಕೂಡ ಕುರುಹು ಇಲ್ಲದಂತಾಗಿದೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನೆಲೆಯೂರಿದೆ.

ಒಲಂಪಿಯಾ, ಶಾಲಿಮಾರ್ ಸಹ ಕಣ್ಮರೆ:

ಚಾಮರಾಜ ಜೋಡಿ ರಸ್ತೆಯ ‘ಲಕ್ಷ್ಮೀ’ ಸಿನಿಮಂದಿರ 3 ವರ್ಷಗಳ ಹಿಂದೆಯೇ ನೆಲಸಮಗೊಂಡಿದೆ. ಕಳೆದ 2 ವರ್ಷಗಳ ಹಿಂದೆ ‘ಶಾಂತಲಾ’ ಕಟ್ಟಡವೂ ಇಲ್ಲವಾಗಿದೆ. ‘ಸರಸ್ವತಿ’ ಚಿತ್ರಮಂದಿರ ಪ್ರದರ್ಶನ ಸ್ಥಗಿತಗೊಳಿಸಿ ವರ್ಷ ಉರುಳಿದ್ದು, ಕಟ್ಟಡವನ್ನು ತೆರವುಗೊಳಿಸುವ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ತಿಲಕ್‌ನಗರದ ‘ಶಾಲಿಮಾರ್’ ಈಗ ಸ್ಕೂಲ್ ಆಗಿ ಪರಿವರ್ತನೆಗೊಂಡಿದೆ. ಕೆ.ಆರ್.ವೃತ್ತ ಬಳಿಯ ‘ಒಲಂಪಿಯಾ’, ಮಂಡಿ ಮೊಹಲ್ಲಾದ ‘ಶ್ರೀನಾಗರಾಜ’ ಚಿತ್ರಮಂದಿರಗಳೂ ಪ್ರದರ್ಶನದಾಟವನ್ನು ನಿಲ್ಲಿಸಿ ಬಾಗಿಲು ಮುಚ್ಚಿವೆ.

ಮೈಸೂರಿನಲ್ಲಿ 80-90 ದಶಕದಲ್ಲಿ ಚಿತ್ರಮಂದಿರಗಳು ಮುಚ್ಚಿರುವುದಕ್ಕೆ ವೈಯಕ್ತಿಕ ಕಾರಣಗಳಿವೆ. 1996ರ ಬಳಿಕ ಬಂದ್ ಆಗಿರುವ ಚಿತ್ರಮಂದಿರಗಳಿಗೆ ಬೇರೆಯೇ ಕಾರಣಗಳಿವೆ. ವಿವಿಧ ತೆರಿಗೆ ಹೊರೆ, ಸರ್ಕಾರದಿಂದ ರಿಯಾಯಿತಿ, ವಿನಾಯಿತಿ, ಸೌಲಭ್ಯ ಕೊಡದಿದ್ದರಿಂದ ನಿರ್ವಹಣೆ ಕಷ್ಟವಾಗಿ ಬಹಳಷ್ಟು ಚಿತ್ರಮಂದಿರಗಳು ತಮ್ಮ ಕಾರ್ಯಸ್ಥಗಿತಗೊಳಿಸಿವೆ.

ನಗರಪಾಲಿಕೆ ಜಾರಿ ಮಾಡಿರುವ ಆಸ್ತಿ ತೆರಿಗೆ ಸಿನಿಮಾ ಮಂದಿರಗಳಿಗೆ ಮರಣ ಶಾಸನವಾಗಿದೆ. ಬೆಂಗಳೂರಿಗಿಂತ ಇಲ್ಲಿ ಶೇ.300 ಪಟ್ಟು ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಈ ಹೊರೆ ತಡೆದುಕೊಳ್ಳಲು ಚಿತ್ರಮಂದಿರ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ.

ಮಲ್ಟಿಫ್ಲೆಕ್ಸ್‌ಗಳಿಗೆ ರತ್ನಕಂಬಳಿ ಹಾಸಿರುವ ಸಿನಿಮಾ ನಿರ್ಮಾಪಕರು, ಚಿತ್ರವಿತರಕರು ಏಕಪರದೆ ಚಿತ್ರಮಂದಿರಗಳನ್ನು ನಿರ್ಲಕ್ಷೃ ಮಾಡುತ್ತಿದ್ದಾರೆ. ಅವರೊಂದಿಗೆ ಚಿತ್ರಪ್ರದರ್ಶನದ ಆದಾಯದಲ್ಲಿ ಹಂಚಿಕೆ ಮಾಡಿಕೊಳ್ಳುತ್ತಾರೆ. ನಮ್ಮನ್ನು ಕಡೆಗಣಿಸುತ್ತಾರೆ. ಹೀಗೆ ತಾರತಮ್ಯ ಮಾಡಿದ್ದರಿಂದ ಬಹಳಷ್ಟು ಚಿತ್ರಮಂದಿರಗಳು ಸತ್ತು ಹೋಗಿವೆ ಎಂದು ಚಿತ್ರಮಂದಿರ ಮಾಲೀಕರ ಅಸಮಾಧಾನವಾಗಿದೆ.

ಸಿನಿಮಾ ಟಿಕೆಟ್ ದರ 200 ರೂ. ಮೀರದಂತೆ ನಿಯಮ ಜಾರಿ ಮಾಡಲಾಗುವುದೆಂದು ಈಗ ಬಜೆಟ್‌ನಲ್ಲಿ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಈ ನಿಯಮ 15 ವರ್ಷಗಳ ಹಿಂದೆಯೇ ಜಾರಿಯಾಗಿದೆ. ರಾಜ್ಯ ಸರ್ಕಾರ ಈಗ ಕಣ್ತೆರೆದಿದೆ. ಸಿನಿ ಪ್ರೇಕ್ಷಕರಿಗೆ ಈಗಲೂ ಆಪ್ತವಾಗಿರುವ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಆಗಬೇಕಿದೆ.

ಸರ್ಕಾರ ತ್ವರಿತ ಕ್ರಮ ವಹಿಸಲಿ

ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ವಹಿಸಬೇಕು. ದೊಡ್ಡ ಕಂಟಕವಾಗಿರುವ ಆಸ್ತಿ ತೆರಿಗೆ ಹೊರೆ ಇಳಿಸಬೇಕು ಎಂದು ಗಾಯತ್ರಿ ಚಿತ್ರಮಂದಿರದ ಮಾಲೀಕರೂ ಆದ ಕರ್ನಾಟಕ ಚಿತ್ರಮಂದಿರ ಮಾಲೀಕರ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಜಾರಾಮ್ ಆಗ್ರಹಿಸಿದರು.

ಚಿತ್ರಮಂದಿರಗಳಿಗೆ ಉದ್ಯಮ ಸ್ಥಾನಮಾನ ನೀಡಬೇಕು. ಜತೆಗೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿರುವ ವಿವಿಧೋದ್ದೇಶ ವಾಣಿಜ್ಯ ಕಟ್ಟಡ ವ್ಯಾಪ್ತಿಯಿಂದ ಚಿತ್ರಮಂದಿರಗಳನ್ನು ಹೊರಗಿಡಬೇಕು. 75, 50, 40, 30 ವರ್ಷಗಳ ಹಳೇ ಚಿತ್ರಮಂದಿರಗಳಿಗೆ ಅವುಗಳ ವಯಸ್ಸಿನ ಮೇಲೆ ಕ್ರಮವಾಗಿ ತೆರಿಗೆ ವಿನಾಯಿತಿ ನೀಡಬೇಕು. ವಿದ್ಯುತ್ ತೆರಿಗೆ, ಮನರಂಜನಾ ತೆರಿಗೆ ಸೇರಿದಂತೆ ವಿವಿಧ ತೆರಿಗೆಯಲ್ಲಿ ರಿಯಾಯಿತಿ ಕೊಡಬೇಕು.

ಹೊಸ ಬಡಾವಣೆಗಳಲ್ಲಿ ಚಿತ್ರಮಂದಿರ ನಿರ್ಮಾಣಕ್ಕೆ ಚಿತ್ರಮಂದಿರ ಮಾಲೀಕರಿಗೆ ಮೊದಲ ಆದ್ಯತೆ ಕೊಡಬೇಕು. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿರುವ ಸೌಲಭ್ಯ, ಉತ್ತೇಜನವನ್ನೂ ರಾಜ್ಯದ ಚಿತ್ರಮಂದಿರಗಳಿಗೂ ನೀಡಬೇಕು. ಹೀಗೆ ಮಾಡಿದರೆ ಚಿತ್ರಮಂದಿರಗಳು, ಚಿತ್ರರಂಗ ಸಹ ಉಳಿದುಕೊಳ್ಳಲಿದೆ. ಇಲ್ಲವಾದರೆ ಕಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.

ಮಲ್ಟಿಫ್ಲೆಕ್ಸ್ ಎದುರು ಸೊರಗಿದ ಏಕಪರದೆಗಳು

ಮಲ್ಟಿಫ್ಲೆಕ್ಸ್‌ಗಳ ಪೈಪೋಟಿಯಿಂದ ಏಕಪರದೆಯ ಚಿತ್ರಮಂದಿರಗಳು ಸೊರಗುತ್ತಿವೆ. ನಗರದಲ್ಲಿ ಆರು ಮಲ್ಟಿಪ್ಲೆಕ್ಸ್‌ಗಳು ಲಾಭದಾಯಕವಾಗಿ ಮುನ್ನುಗ್ಗುತ್ತಿವೆ. ಜಯಲಕ್ಷ್ಮೀಪುರಂ ಬಿ.ಎಂ.ಹೆಬಿಟೇಟ್ ಮಾಲ್‌ನಲ್ಲಿ ಡಿಆರ್‌ಸಿ ಮಲ್ಟಿಫ್ಲೆಕ್ಸ್, ರೇಸ್‌ಕೋರ್ಸ್ ಬಳಿಯ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್, ನಗರ ಬಸ್ ನಿಲ್ದಾಣ ಬಳಿಯ ಗರುಡ ಮಾಲ್‌ನಲ್ಲಿರುವ ಪಿವಿಆರ್, ಸೆಂಟ್ರೋ ಮಾಲ್‌ನಲ್ಲಿ ಐನಾಕ್ಸ್, ಎಸ್.ಪಿ. ಕಚೇರಿ ಬಳಿಯ ನೆಕ್ಸಸ್ ಮಾಲ್‌ನಲ್ಲಿ ಪಿವಿಆರ್ ಹಾಗೂ ಮೈಸೂರು ವಿಷನ್ ಸಿನಿಮಾಸ್ ಕೇಂದ್ರಗಳಲ್ಲಿ ಬಹುಪರದೆಯ ಮಲ್ಟಿಫ್ಲೆಕ್ಸ್‌ಗಳು ವಿಜೃಂಭಿಸುತ್ತಿವೆ.

ಮಾಲ್‌ಗೆ ಶಾಂಪಿಂಗ್ ಮೊದಲಾದ ಕಾರ್ಯಗಳಿಗೆ ಹೋಗುವವರು ಮಲ್ಟಿಫ್ಲೆಕ್ಸ್‌ಗಳಿಗೂ ತೆರಳುತ್ತಾರೆ. ವರ್ಣರಂಜಿತ, ಆಧುನಿಕ ಸೌಲಭ್ಯದಿಂದಾಗಿ ಎಲ್ಲ ವಯೋಮಾನದವರನ್ನೂ ಆಕರ್ಷಿಸುತ್ತಿವೆ. ಥಿಯೇಟರ್‌ಗಿಂತ ಇಲ್ಲಿಗೆ ಸಿನಿರಸಿಕರು ಹೆಚ್ಚಾಗಿ ಹೋಗುತ್ತಿದ್ದಾರೆ. ಸಾಮಾನ್ಯ ಚಿತ್ರಮಂದಿರಗಳಿಗೆ ಹೋಲಿಸಿದರೆ ಇಲ್ಲಿ ಸ್ವಚ್ಛತೆ, ಉತ್ತಮ ಆಸನಗಳ ವ್ಯವಸ್ಥೆ, ಎ.ಸಿ. ಸೌಲಭ್ಯ ಇಷ್ಟವಾಗುತ್ತಿದೆ. ಹೀಗಾಗಿ, ಟಿಕೆಟ್ ದರ ದುಬಾರಿಯಾದರೂ ಪ್ರೇಕ್ಷಕರು ಮಲ್ಟಿಫ್ಲೆಕ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಮೊಬೈಲ್, ಟಿವಿಯಲ್ಲೇ ಒಟಿಟಿ ವೇದಿಕೆಯಲ್ಲಿ ಸಿನಿಮಾಗಳು ಸುಲಭವಾಗಿ ದೊರೆಯುತ್ತಿರುವುದರಿಂದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ.

ಮರೆಯಾದ ಟಾಕೀಸ್‌ಗಳು

*ರಣಜಿತ್

*ರಿಜೆನ್ಸಿ

*ಒಲಂಪಿಯಾ

*ಲಕ್ಷ್ಮೀ

*ಶಾಂತಲಾ

*ಸರಸ್ವತಿ

*ಅಪೇರಾ

*ಸ್ಟರ್ಲಿಂಗ್-ಸ್ಕೈಲೈನ್

*ಶಾಲಿಮಾರ್

*ಶ್ರೀನಾಗರಾಜ

ಪ್ರದರ್ಶನ ಮುಂದುವರಿಸಿರುವ ಸಿನಿಮಾ ಮಂದಿರಗಳು

* ಗಾಯತ್ರಿ

* ಸಂಗಮ್

* ರಾಜ್‌ಕಮಲ್

* ಉಡ್‌ಲ್ಯಾಂಡ್

* ಲಿಡೋ

* ಪ್ರಭಾ

* ಉಮಾ

* ಪದ್ಮಾ

* ತಿಬ್ಬಾದೇವಿ

* ಮಹದೇಶ್ವರ

* ಬಾಲಾಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net