ಮೈಸೂರಿನಲ್ಲಿ ಅರಣ್ಯ ಇಲಾಖೆಯ 62 ಹುತಾತ್ಮರ ಸ್ಮರಣೆ

mysore
Published on

ಮೈಸೂರು: ಅರಣ್ಯ ಸಿಬ್ಬಂದಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸಲಹೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ನೌಕರ ಕರ್ತವ್ಯದ ವೇಳೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಮೈಮರೆಯಬಾರದು. ಅರಣ್ಯ ಸಿಬ್ಬಂದಿ ಸೇವೆ ಮಹತ್ವದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದಾಗಲೇ ಅನೇಕ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರ ತ್ಯಾಗಕ್ಕೆ ಬೆಲೆಕಟ್ಟಲಾಗದು. ಮುಂದಿನ ಪೀಳಿಗೆಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಿಸಿ ಕೊಡುಗೆ ನೀಡಲು ಅರಣ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಹುತಾತ್ಮರಾದ ಅರಣ್ಯ ಯೋಧರು ಅರಣ್ಯ ಸಂಪತ್ತನ್ನು ಸಂರಕ್ಷಿಲು ಹೋಗಿ ಪ್ರಾಣ ತೆತ್ತಿದ್ದಾರೆ. ಅವರ ತ್ಯಾಗದ ಮನೋಭಾವ, ಕರ್ತವ್ಯದ ಮೇಲಿನ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿ ವನ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಸಂರಕ್ಷಣೆ ವೇಳೆ ಕರ್ತವ್ಯದಲ್ಲಿದ್ದಾಗಲೇ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಿರಿಯ ಐಎಫ್‌ಎಸ್ ಅಧಿಕಾರಿಗಳಾದ ದಿ.ಶ್ರೀನಿವಾಸನ್ ಹಾಗೂ ದಿ. ಮಣಿಕಂಠನ್ ಸೇರಿದಂತೆ ಕರ್ತವ್ಯದ ವೇಳೆ ವನ್ಯಜೀವಿ ದಾಳಿ, ಕಾಡುಗಳ್ಳರ ದಾಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುತಾತ್ಮರಾದ 62 ಹುತಾತ್ಮರ ಹೆಸರನ್ನು ಡಿಸಿಎಫ್ ಕೆ.ಪರಮೇಶ್ ಅವರು ವಾಚಿಸಿ, ಹುತಾತ್ಮರ ದಿನದ ವಿವರಣೆ ನೀಡಿದರು.

ಬಳಿಕ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಹುತಾತ್ಮರಿಗೆ ಗೌರವ ಸಮರ್ಪಿಸಿದರು. ನಂತರ ಮೌನ ಆಚರಿಸಿದರು. ಹುತಾತ್ಮರ ಸ್ಮಾರಕಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.

ಮೈಸೂರು ವೃತ್ತದ ಸಿಎಫ್ ಡಾ.ಎಸ್.ಎಸ್.ರವಿಶಂಕರ್, ಡಿಸಿಪಿ ಸುಂದರರಾಜ್, ಕಾರ್ಯಯೋಜನೆ ಡಿಸಿಎಫ್ ಲಿಂಗರಾಜು, ಆರ್‌ಎಫ್‌ಒ ಸಂತೋಷ್ ಹೂಗಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net