

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧೆಡೆ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸಲಾಯಿತು.
ಅಪ್ಪು ಅಗಲಿ ಶನಿವಾರಕ್ಕೆ ಒಂದು ವರ್ಷ. ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಹಲವೆಡೆ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ವಿವಿಧ ಸೇವಾ ಕಾರ್ಯ ಕೈಗೊಳ್ಳುವ ಮೂಲಕ ‘ಯುವರತ್ನ’ನಿಗೆ ನಮನ ಸಲ್ಲಿಸಲಾಯಿತು. ಜತೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ಅಪ್ಪು ಅಭಿನಯದ ಚಲನಚಿತ್ರಗಳ ಹಾಡುಗಳು ರಿಂಗಣಿಸಿದವು.
ಹಾಲಿನ ಪ್ಯಾಕೆಟ್ ಮೂಲಕ ಗೌರವ: ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಗಂಧದಗುಡಿ ಚಿತ್ರದ ಹೆಸರು ಮುದ್ರಣ ಮಾಡುವ ಮೂಲಕ ಪುನೀತ್‌ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿತು.
ಕೆಎಂಎಫ್ ರಾಯಭಾರಿಯಾಗಿ ಜಾಹೀರಾತುಗಳಿಗೆ ಯಾವುದೇ ಸಂಭಾವನೆ ಪಡೆಯದೇ ನಟಿಸುತ್ತಿದ್ದ ಪುನೀತ್ ಅವರನ್ನು ಈ ಮೂಲಕ ಸ್ಮರಿಸಲಾಯಿತು. ಇದು ಇಂದಿನಿಂದ 15 ದಿನಗಳ ಕಾಲ ಮುಂದುವರಿಯಲಿದೆ. ಈ ಕ್ರಮದಿಂದ ಗಂಧದಗುಡಿ ಚಿತ್ರಕ್ಕೆ ಮತ್ತಷ್ಟು ಪ್ರಚಾರ ದೊರೆಯಲಿದೆ.
ಭಾವಚಿತ್ರಕ್ಕೆ ಪುಷ್ಪ ನಮನ:
ರಾಮಕೃಷ್ಣನಗರದಲ್ಲಿರುವ ರಾಮಕೃಷ್ಣ ಪರಮಹಂಸರ ವೃತ್ತದ ಸುತ್ತಲು ‘ನಟಸಾರ್ವಭೌಮ’ನ ಭಾವಚಿತ್ರ ಹಾಕಿ ಗಮನ ಸೆಳೆಯಲಾಯಿತು. ಅನ್ನಸಂತರ್ಪಣೆ ಮಾಡಲಾಯಿತು. ಚಾಮುಂಡಿಪುರಂ ವೃತ್ತದಲ್ಲೂ ಇದೇ ರೀತಿ ಅಂಜನಿಪುತ್ರನನ್ನು ಸ್ಮರಿಸಲಾಯಿತು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಂಜುಳಾ ಸೌಂಡ್ ಸಿಸ್ಟಮ್‌ನಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ, ರೋಹಿತ್, ಎನ್.ಆರ್.ನಾಗೇಶ್, ಲೋಕೇಶ್‌ಕುಮಾರ್ ಮಾದಾಪುರ, ಹರೀಶ್ ಮೊಗಣ್ಣ, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೂಜೆ ಸಲ್ಲಿಕೆ:
ಪಡುವಾರಹಳ್ಳಿಯಲ್ಲೂ ದೊಡ್ಮನೆ ಹುಡುಗನಿಗೆ ಮೊದಲ ವರ್ಷದ ಪುಣ್ಯ ಸ್ಮರಣೆ ಅರ್ಪಿಸಲಾಯಿತು. ಪಡುವಾರಹಳ್ಳಿಯ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ಅಪ್ಪು ಪ್ರತಿಮೆ ಹಾಗು ಭಾವಚಿತ್ರಕ್ಕೆ ಅಭಿಮಾನಿಗಳು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಬಳಿಕ ಅನ್ನಸಂತರ್ಪಣೆ ಮಾಡಿ ಅಭಿಮಾನ ಪ್ರದರ್ಶಿಸಿದರು. ಬಳಗದ ರಮೇಶ್, ಚಂದ್ರು, ಸೋಮು ಇನ್ನಿತರರು ಇದ್ದರು.