ಮೈಸೂರಿನಲ್ಲಿ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ 12ನೇ ಸಮಾವೇಶ

Published on

ಮೈಸೂರು: ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ 12ನೇ ಸಮಾವೇಶ ನ.6ರಿಂದ 8ರ ವರೆಗೆ ನಗರದಲ್ಲಿ ಆಯೋಜಿಸಲಾಗಿದೆ.
ಜೆಎಲ್‌ಬಿ ರಸ್ತೆಯಲ್ಲಿರುವ ಗೋವಿಂದರಾವ್ ಸ್ಮಾರಕ ಸಭಾಂಗಣ (ಗುರು ರೆಸಿಡೆನ್ಸಿ ಹೋಟೆಲ್ ಬಳಿ)ದಲ್ಲಿ ಸಮಾವೇಶ ಆಯೋಜಿಸಲಾಗಿದ್ದು, ಒಕ್ಕೂಟದ ಮುಖಂಡರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಎ.ಶ್ರೀನಿವಾಸ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು. ಅಂಚೆ ಇಲಾಖೆ ಖಾಸಗೀಕರಣ ಕೈ ಬಿಡಬೇಕು, ಹೊಸ ಪಿಂಚಣಿ ಯೋಜನೆ ಹಿಂದಕ್ಕೆ ಪಡೆಯಬೇಕು, ಮೂಲ ವೇತನದಿಂದ ಶೇ.10ರಷ್ಟು ಕಡಿತಗೊಳಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ನಂತರ ಬಿಡಿಗಾಸಿನ ನಿವೃತ್ತ ವೇತನ ನೀಡುವ ವ್ಯವಸ್ಥೆ ನಿಲ್ಲಿಸಬೇಕು ಎಂದು ಆಗ್ರಹಿಸಲಾಗುವುದು.
ಅಲ್ಲದೆ, ಎಂಟನೇ ವೇತನ ಆಯೋಗ ರಚಿಸಬೇಕು, ಗ್ರಾಮೀಣ ಅಂಚೆ ಸೇವಕರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಲ್ಲ ರೀತಿಯ ಸೌಲಭ್ಯ ನೀಡಬೇಕು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಎಲ್ಲ ವರ್ಗದ ನೌಕರರಿಗೂ ಸೇವಾವಧಿಯಲ್ಲಿ ಬಡ್ತಿ ನೀಡಬೇಕು, ದಿನಗೂಲಿ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.
ಒಕ್ಕೂಟದ ಪದಾಧಿಕಾರಿಗಳಾದ ಜನಾರ್ದನ್ ಮಜುಂದಾರ್, ಗಿರಿರಾಜ್ ಸಿಂಗ್, ಧರ್ಮೇಂದ್ರ ಜೈನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net