ಮೈಸೂರಿನಲ್ಲಿ 4ರಂದು ದಕ್ಷಿಣ, ನೈಋತ್ಯ ಪ್ರದೇಶಗಳ ಭಾಷಾ ಸಮ್ಮೇಳನ

mysore
Published on

ಮೈಸೂರು: ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಭಾಷಾ ಇಲಾಖೆ ವತಿಯಿಂದ ಹಿಂದಿ ಭಾಷೆ ಪ್ರಚಾರಕ್ಕಾಗಿ ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳ ಅಧಿಕೃತ ಭಾಷಾ ಸಮ್ಮೇಳನವನ್ನು ಜ.4 ರಂದು ಬೆಳಗ್ಗೆ 9ಕ್ಕೆ ನಗರದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಬಿಹಾರದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಳ್ಳಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ನಿರ್ದೇಶಕ ರಾಜೇಶ್‌ಕುಮಾರ್ ಶ್ರೀವಾಸ್ತವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಕ್ಷಿಣ ಪ್ರದೇಶವು ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳನ್ನು ಒಳಗೊಂಡಿದೆ. ನೈಋತ್ಯವು ಕೇರಳ, ತಮಿಳುನಾಡು, ಪುದುಚೇರಿ ಮತ್ತು ಲಕ್ಷದ್ವೀಪವನ್ನು ಒಳಗೊಂಡಿದೆ. ವಿವಿಧ ವಿಭಾಗಗಳ ಅಡಿಯಲ್ಲಿ ಅಧಿಕೃತ ಭಾಷೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್‌ಗಳು, ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುವುದು. ಮಾಹಿತಿ ನಿರ್ವಹಣಾ ವ್ಯವಸ್ಥೆಯ ಮೂಲಕ ಪಡೆದ ತ್ರೈಮಾಸಿಕ ಪ್ರಗತಿ ವರದಿ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಒಕ್ಕೂಟದ ಅಧಿಕೃತ ಭಾಷೆ ಹಿಂದಿ ಮತ್ತು ಲಿಪಿಯು ದೇವನಾಗರಿಯಾಗಿದ್ದು, ಈ ಭಾಷೆಗಳ ಪ್ರಚಾರಕ್ಕಾಗಿ ಜೂನ್ 1975ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಅಧಿಕೃತ ಭಾಷಾ ಇಲಾಖೆಯನ್ನು ಸ್ಥಾಪಿಸಲಾಯಿತು. ಸರ್ಕಾರಿ ಕೆಲಸಗಳಲ್ಲಿ ಹಿಂದಿ ಭಾಷಾ ಬಳಕೆಯನ್ನು ಪ್ರೋತ್ಸಾಹಿಸಲು ಈ ಇಲಾಖೆಯು ನಿರಂತರ ಪ್ರಯತ್ನ ಮಾಡುತ್ತದೆ. ಈ ಅನುಕ್ರಮದಲ್ಲಿ 4 ಪ್ರಾದೇಶಿಕ ಅಧಿಕೃತ ಭಾಷಾ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಇದು 2024-25ನೇ ಸಾಲಿನ ಮೊದಲ ಸಮ್ಮೇಳನವಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿ ಭಾಷಾ ಬಳಕೆಯ ಆಧಾರದ ಮೇಲೆ ದೇಶವನ್ನು 3 ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ಅಧಿಕೃತ ಭಾಷಾ ನೀತಿಯ ಅನುಷ್ಠಾನಕ್ಕಾಗಿ ಮತ್ತು ಹಿಂದಿ ಭಾಷಾ ಬಳಕೆ ಪ್ರೋತ್ಸಾಹ ನೀಡಲು ಅಧಿಕೃತ ಭಾಷಾ ಅನುಷ್ಠಾನ ಸಮಿತಿಗಳು, 8 ಪ್ರಾದೇಶಿಕ ಕಚೇರಿಗಳು ಈ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಗೃಹ ವ್ಯವಹಾರಗಳ ಸಚಿವಾಲಯದ ಉಪಕಾರ್ಯದರ್ಶಿ ಅನಿಲ್‌ಕುಮಾರ್, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್, ಅಧಿಕೃತ ಭಾಷಾ ಅನುಷ್ಠಾನದ ಉಪನಿರ್ದೇಶಕ ಅನಿರ್ಬನ್ ಕುಮಾರ್ ಬಿಸ್ವಾಸ್, ಮತ್ತೊಬ್ಬ ಅಧಿಕಾರಿ ಗಿರಿಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net