ಮೈಸೂರಿನಲ್ಲಿ 26ರಿಂದ ಮೂರು ದಿನ ಮಾವಿನ ಮೇಳ

DSC_8451
Published on

ನೈಸರ್ಗಿಕ ವಿಧಾನದಲ್ಲಿ ಮಾಗಿಸಿರುವ ಮಾವಿನಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ವತಿಯಿಂದ ಮೇ 26ರಿಂದ ಮೂರು ದಿನಗಳ ಕಾಲ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಮಾವಿನ ಮೇಳ ಆಯೋಜಿಸಲಾಗಿದೆ. ವಿವಿಧ ಬಗೆಯ ಮಾವಿನಹಣ್ಣುಗಳು ಒಂದೇ ಸೂರಿನಲ್ಲಿ ಗ್ರಾಹಕರಿಗೆ ದೊರೆಯಲಿವೆ.


ಪ್ರತಿ ವರ್ಷವೂ ತೋಟಗಾರಿಕಾ ಇಲಾಖೆ ವತಿಯಿಂದ ನಗರದಲ್ಲಿ ಮಾವಿನ ಮೇಳ ಹಮ್ಮಿಕೊಳ್ಳಲಾಗುತ್ತದೆ. ನೋಂದಾಯಿತ ರೈತರು ನೈಸರ್ಗಿಕ ವಿಧಾನದ ಮೂಲಕ ಬೆಳೆದು, ಮಾಗಿಸಿದ ಮಾವಿನಹಣ್ಣುಗಳನ್ನು ನೇರವಾಗಿ ಗ್ರಾಹಕರ ಕೈ ತಲುಪಿಸಲು ಮೇಳವನ್ನು ನಡೆಸಲಾಗುತ್ತದೆ. ಆದರೆ, ಈ ಸಲ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇಳ ತಡವಾಗಿ ಏರ್ಪಡಿಸಲಾಗಿದೆ.


ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ವೇದಿಕೆ ಆಗಿರುವ ಈ ಮೇಳದಲ್ಲಿ 20 ಮಳಿಗೆಗಳಲ್ಲಿ ಮಾವಿನಹಣ್ಣು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಆದ್ಯತೆ ನೀಡಲಾಗಿದೆ. ಮೈಸೂರು ಜಿಲ್ಲೆಯ 10 ಮಾವು ಬೆಳೆಗಾರರು ಮೇಳದಲ್ಲಿ ಪಾಲ್ಗೊಳ್ಳಲು ಬಯಸಿದ್ದು, ಇನ್ನಷ್ಟು ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.


ರತ್ನಗಿರಿ, ಅಲ್ಫಾನ್ಸೋ, ಬಾದಾಮಿ, ಬಂಗನಾಪಲ್ಲಿ, ರಸಪುರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ಸೆಂದುರ, ನೀಲಂ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಗ್ರಾಹಕರಿಗೆ ದೊರೆಯಲಿವೆ.


ಮಾರಾಟಕ್ಕಿಡುವ ಮಾವಿನಹಣ್ಣುಗಳಲ್ಲಿ ರಾಸಾಯನಿಕ ವಸ್ತು ಬಳಸಿ ಹಣ್ಣು ಮಾಡಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಮೇಳಕ್ಕೆ ಬರುವ ಎಲ್ಲ ರೈತರಿಗೂ ಮೊದಲೇ ಎಚ್ಚರಿಕೆ ನೀಡಲಾಗಿದ್ದು, ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಹಣ್ಣುಗಳನ್ನಷ್ಟೇ ತರುವಂತೆ ಸೂಚನೆ ನೀಡಲಾಗಿದೆ. ರಾಸಾಯನಿಕ ವಸ್ತು ಬಳಸಿದ್ದರೆ ಅದನ್ನು ಪತ್ತೆ ಮಾಡಲು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಲಾಗುತ್ತದೆ.


ಸಾಮಾನ್ಯವಾಗಿ ಕೆಲವರು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾವನ್ನು ಮಾಗಿಸುವ ದೂರು ಕೇಳಿ ಬಂದಿದ್ದು, ಇದರಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಸಾಯನಿಕ ವಸ್ತು ಬಳಕೆ ಮಾಡಿದ ಹಣ್ಣುಗಳ ಮಾರಾಟವನ್ನು ನಿರ್ಬಂಧಿಸಲಾಗಿದೆ. ರಾಸಾಯನಿಕ ಬಳಸಿರುವ ಹಣ್ಣುಗಳು ಹೆಚ್ಚು ಆಕರ್ಷಕವಾಗಿ, ಗಾಢ ಬಣ್ಣದಿಂದ ಕೂಡಿರುತ್ತವೆ. ಮೇಲ್ನೋಟಕ್ಕೆ ಅವುಗಳನ್ನು ಗುರುತಿಸಬಹುದಾಗಿದೆ. ಸುಲಭವಾಗಿ ಪತ್ತೆಯೂ ಮಾಡಬಹುದಾಗಿದೆ.


ಹಾಪ್‌ಕಾಮ್ಸ್, ಎಪಿಎಂಸಿಯಲ್ಲಿರುವ ಬೆಲೆಗೆ ಅನುಗುಣವಾಗಿ ಮಾವಿನ ಮೇಳದಲ್ಲಿ ಮಾರಾಟ ಮಾಡುವ ಹಣ್ಣು ಬೆಲೆ ನಿಗದಿ ಪಡಿಸಲಾಗಿದೆ. ಪ್ರತಿದಿನ ಮಾವಿನ ಹಣ್ಣಿನ ಬೆಲೆ ನಿಗದಿ ಮಾಡಿ, ಮಳಿಗೆ ಮುಂದೆ ದರಫಲಕ ಹಾಕುವಂತೆ ಸೂಚಿಸಲಾಗಿದೆ
ಸಸ್ಯ ಮೇಳ:

ಮಾವು ಮೇಳದಲ್ಲೇ ವಿವಿಧ ಸಸ್ಯಗಳ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿರುವ ವಿವಿಧ ಹಣ್ಣು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ. ತೆಂಗಿನಗಿಡ, ಮಾವು, ಹಲಸು, ಸೀಬೆ, ನೇರಳೆ, ಜಂಬುನೇರಳೆ, ನುಗ್ಗೆ ಸೇರಿದಂತೆ ವಿವಿಧ ಗಿಡಗಳು ಮಾರಾಟಕ್ಕೆ ಲಭ್ಯ ಇರಲಿವೆ.

ಕಳೆದ ಬಾರಿ ಉತ್ತಮ ಸ್ಪಂದನೆ:
ಕಳೆದ ವರ್ಷ ಕುಪ್ಪಣ್ಣ ಪಾರ್ಕ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದಿದ್ದ ಮಾವು ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿತ್ತು. ಬರೋಬ್ಬರಿ 74 ಟನ್ ಮಾವು ಮಾರಾಟವಾಗಿತ್ತು. ಮೈಸೂರು ನಗರ ಜಿಲ್ಲೆ ಸೇರಿದಂತೆ ಹೊರ ಭಾಗದಿಂದ 5 ಸಾವಿರ ಜನರು ಭೇಟಿ ನೀಡಿದ್ದರು. ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಕನಕಪುರದ ಮಾವು ಬೆಳೆಗಾರರು ವಿವಿಧ 12ಕ್ಕೂ ಹೆಚ್ಚು ತಳಿಯ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು.

ಮೈಸೂರು, ಮಂಡ್ಯ ಹಾಗೂ ರಾಮನಗರ ಭಾಗದ ರೈತರು ತೆರೆದಿದ್ದ 24 ಮಳಿಗೆಗಳಲ್ಲಿ ಬಾದಾಮಿ - 30, ರಸಪುರಿ - 8, ತೋತಪುರಿ - 5, ಮಲಗೋವಾ -4, ಸೆಂದುರ- 4 ಹಾಗೂ ದಸೇರಿ, ಹಿಮಾಪಸಂದ್, ಬಂಗಾನಪಲ್ಲಿ, ಸಕ್ಕರೆಗುತ್ತಿ ಸೇರಿದಂತೆ ಇತರ ತಳಿಯ 5 ಟನ್ ಮಾವು ಮಾರಾಟವಾಗಿತ್ತು. ಬೆಳೆಗಾರರು ಸಂತಸಗೊಂಡಿದ್ದರು. ಈ ಸಲವೂ ಭರ್ಜರಿ ವ್ಯಾಪಾರದೊಂದಿಗೆ ಮೇಳಕ್ಕೆ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ.

ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಈ ಸಲವೂ ಮಾವು ಮೇಳ ಹಮ್ಮಿಕೊಳ್ಳಲಾಗಿದೆ. ಹಾಪ್‌ಕಾಮ್ಸ್ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ರೈತರೊಂದಿಗೆ ಸಭೆ ನಡೆಸಿ ಆಹ್ವಾನಿಸಲಾಗಿದೆ. ರೈತರು ತಾವು ಬೆಳೆದಿರುವ ಮಾವಿನ ಹಣುಗಳನ್ನು ಮೇಳಕ್ಕೆ ತಂದು ಮಾರಾಟ ಮಾಡಲಿದ್ದು, ನೈಸರ್ಗಿಕ ಪದ್ಧತಿಯಲ್ಲೇ ಮಾಗಿಸಿರುವ ಹಣ್ಣುಗಳ ಮಾರಾಟಕ್ಕೆ ಕ್ರಮ ವಹಿಸಲಾಗಿದೆ.
ಕೆ.ರುದ್ರೇಶ್, ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net