ಮೈಸೂರಿನಲ್ಲಿ 22ರಂದು ರಾಷ್ಟ್ರಮಟ್ಟದ ಶ್ವಾನಗಳ ಸ್ಪರ್ಧೆ

news-3-4-1
Published on

ಮೈಸೂರು: ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ರಾಷ್ಟ್ರ ಮಟ್ಟದ ಶ್ವಾನಗಳ ಸ್ಪರ್ಧೆಯನ್ನು ಜ.22ರಂದು ಬೆಳಗ್ಗೆ 9ಕ್ಕೆ ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಸ್ವದೇಶಿ ಹಾಗೂ ವಿದೇಶಿ ತಳಿಗಳು ಒಳಗೊಂಡಂತೆ 45 ಬಗೆಯ ತಳಿಗಳ 500ಕ್ಕೂ ಹೆಚ್ಚು ಶ್ವಾನಗಳು ದೇಶದ ವಿವಿಧ ಭಾಗಗಳಿಂದ ಸ್ಪರ್ಧೆಗೆ ಆಗಮಿಸಲಿವೆ. ಶ್ವಾನಗಳ ನೋಂದಣಿಗೆ 2 ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಈಗಾಗಲೇ 400ಕ್ಕೂ ಹೆಚ್ಚು ಶ್ವಾನಗಳು ನೋಂದಣಿ ಆಗಿವೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಪಿ. ಮಂಜುನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆನೈನ್ ಕ್ಲಬ್ ಆಫ್ ಇಂಡಿಯಾದ ಮೈಕ್ರೋ ಚಿಪ್ ಹಾಗೂ ವಂಶಾವಳಿ ದಾಖಲೆ ಹೊಂದಿರುವ ಶ್ವಾನಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. 6 ತಿಂಗಳ ಪಪ್ಪಿ, ಗಂಡು ಹಾಗೂ ಹೆಣ್ಣು, 6ರಿಂದ 12 ತಿಂಗಳು, 12ರಿಂದ 18 ತಿಂಗಳು, 18ರಿಂದ 36 ತಿಂಗಳು ಮತ್ತು 36 ತಿಂಗಳ ಮೇಲಿನ ವಯೋಮಾನದ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಬೆಸ್ಟ್ ಇನ್ ಶೋ ಲೈನ್ ಆಫ್ ವಿಭಾಗಕ್ಕೆ 9 ಶ್ವಾನಗಳನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.

ವಿವಿಧ ವಿಭಾಗಗಳಲ್ಲಿ ಕ್ರಮವಾಗಿ 3 ಸ್ಥಾನ ನೀಡಲಾಗುವುದು. ಈ ಸ್ಥಾನಗಳಿಗೆ ಆಯ್ಕೆಗೊಂಡ ಶ್ವಾನಗಳಿಗೆ ಪ್ರಮಾಣಪತ್ರ ಹಾಗೂ ಟ್ರೋಫಿ ಪ್ರದಾನ ಮಾಡಲಾಗುವುದು. ಅಂದು ರಾತ್ರಿ 8ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಚೆನ್ನೈನ ಸಿ.ವಿ. ಸುದರ್ಶನ್, ಟಿ.ಪ್ರೀತಂ ಮತ್ತು ಬೆಂಗಳೂರಿನ ಯಶೋದರಾ ಹೇಮಚಂದ ತೀರ್ಪುಗಾರರಾಗಿದ್ದಾರೆ. ಈ ಬಾರಿ ಸ್ವದೇಶಿ ತಳಿಗಳ ವಿಶೇಷ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ಮುದೋಳ್ ಶ್ವಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಪ್ರದರ್ಶನಕ್ಕೆ ಮೂರು ದಿನ ಮುಂಚಿತವಾಗಿ ಆನ್‌ಲೈನ್ ಮುಖಾಂತರ ನೋಂದಣಿಯಾಗಿರುವ ಶ್ವಾನಗಳಿಗಷ್ಟೇ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಮಿಶ್ರತಳಿ (ಕ್ರಾಸ್ ಬ್ರೀಡ್) ಶ್ವಾನಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.

ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕ್ಲಬ್ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಪ್ರದರ್ಶನದ ಕಾರ್ಯದರ್ಶಿ ಡಾ.ಜಯರಾಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ, ಅಭಿಷೇಕ್ ಹೆಗಡೆ, ಜಂಟಿ ಕಾರ್ಯದರ್ಶಿ ತೇಜಸ್ವಿ ಮೋಹನ್, ವಿನಿತ್, ಗಿರೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net