

ಪಾಠ-ಆಟವಾಡಿಕೊಂಡು ಬಾಲ್ಯ ಸಂಭ್ರಮಿಸಬೇಕಿರುವ ಮಕ್ಕಳು ಭಿಕ್ಷಾಟನೆ, ಬಾಲ ಕಾರ್ಮಿಕರು ಪಿಡುಗು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಿಲುಕಿ ಭವಿಷ್ಯ ಹಾಳಾಗುತ್ತಿದ್ದು, ಇಂತಹ ಕೂಪದಿಂದ ಅಸಹಾಯಕರನ್ನು ಹೊರತಂದು ಪುನರ್ವಸತಿ ಕಲ್ಪಿಸುವ ಕಾಯಕ ಸದ್ದಿಲ್ಲದೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ 478 ಮಕ್ಕಳನ್ನು ರಕ್ಷಿಸಲಾಗಿದೆ.
18 ವರ್ಷದೊಳಗಿನ ಮಕ್ಕಳು ಮುಗ್ಧರು. ಸಮಾಜದ ಭವಿಷ್ಯವಾಗಿರುವ ಇವರು ಕುಟುಂಬ, ಸಾರ್ವಜನಿಕ ವ್ಯವಸ್ಥೆಯಿಂದ ವಂಚನೆಗೆ ಒಳಗಾಗಬಾರದು. ಮಕ್ಕಳಸ್ನೇಹಿ, ಅವರ ಹಕ್ಕುಗಳ ರಕ್ಷಣೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಸಮಾಜದ ಹೊಣೆಗಾರಿಕೆ. ಈ ಹಿನ್ನೆಲೆಯಲ್ಲಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಇದರ ಪಾಲನೆಗಾಗಿ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ತೆರೆಮರೆಯಲ್ಲೇ ಕೆಲಸ ಮಾಡುತ್ತಿವೆ.
ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿ, ಶಾಲೆಯಿಂದ ಹೊರ ಉಳಿಯುವಿಕೆ, ಶಾಲೆಯಲ್ಲಿನ ಸಮಸ್ಯೆಗಳು, ನಾಪತ್ತೆ, ಮನೆಯಿಂದ ಓಡಿ ಹೋಗುವಂತಹ ಪ್ರವೃತಿಗೆ ಕೆಲ ಮಕ್ಕಳು ಬಲಿಯಾಗುತ್ತಿದ್ದಾರೆ. ಇದು ಅವರ ಭವಿಷ್ಯಕ್ಕೆ ಕಂಟಕವಾಗಿದೆ. ಸಮಾಜಕ್ಕೂ ಕಪ್ಪುಚುಕ್ಕಿಯೇ. ಜತೆಗೆ ಅನೇಕ ಸಾಮಾಜಿಕ ಸಮಸ್ಯೆಗಳ ಸೃಷ್ಟಿಗೂ ಕಾರಣವಾಗಿದೆ.
ಹೀಗೆ ಅಸಹಾಯಕ ಮಕ್ಕಳ ಕುರಿತು ಕಳೆದ ಎರಡು ವರ್ಷದಲ್ಲಿ 573 ದೂರು ಅಥವಾ ಪ್ರಕರಣಗಳು ದಾಖಲಾಗಿವೆ.
ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ ‘ಮಕ್ಕಳ ಸಹಾಯವಾಣಿ ಘಟಕ’ಕ್ಕೆ(1098/112) ಸಾರ್ವಜನಿಕರು ದೂರವಾಣಿ ಮೂಲಕ ದೂರು ನೀಡಿದ್ದಾರೆ. 2024-25ನೇ ಸಾಲಿನಲ್ಲಿ 266 ಪ್ರಕರಣಗಳು ದಾಖಲಾದರೆ, 2023-24ನೇ ಸಾಲಿನಲ್ಲಿ 307 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶಾಲೆಯಿಂದ ಹೊರ ಉಳಿಯುವಿಕೆ, ಶಾಲೆಯಲ್ಲಿನ ಸಮಸ್ಯೆಗಳ ಪ್ರಕರಣಗಳೇ ಹೆಚ್ಚು. ಬಳಿಕ ಭಿಕ್ಷಾಟನೆ, ಬಾಲಕಾರ್ಮಿಕ ಪ್ರಕರಣಗಳು ನಂತರ ಸ್ಥಾನದಲ್ಲಿ ಇವೆ.
ಈ ದೂರು ಆಧರಿಸಿ ಮಕ್ಕಳ ರಕ್ಷಣೆಯನ್ನೂ ಮಾಡಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಪೊಲೀಸ್ ಘಟಕ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆ, ಡಾನ್ ಬೋಸ್ಕೊ ಮಕ್ಕಳಾಲಯದಂತಹ ಸರ್ಕಾರೇತರ ಸಂಸ್ಥೆಗಳು ನಿರ್ದಿಷ್ಟ ಪ್ರಕರಣಗಳಲ್ಲಿ ಮಕ್ಕಳ ರಕ್ಷಣೆಗೆ ಶ್ರಮಿಸಿವೆ. ಇದರ ಫಲವಾಗಿ ಎರಡು ವರ್ಷದಲ್ಲಿ 478 ಮಕ್ಕಳನ್ನು ಸಂರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಿಕೊಡಲಾಗಿದೆ.
2023-24ನೇ ಸಾಲಿನಲ್ಲಿ 265 ಮತ್ತು 2024-25ನೇ ಸಾಲಿನಲ್ಲಿ 213 ಮಕ್ಕಳನ್ನು ಕಾಪಾಡಿರುವುದು ಇದರಲ್ಲಿ ಸೇರಿದೆ. ಆದರೆ ತಪ್ಪು ಮಾಹಿತಿ, ನಿರ್ದಿಷ್ಟ ಸ್ಥಳದಲ್ಲಿ ಮಕ್ಕಳು ಕೈಗೆ ಸಿಗದಿರುವುದು... ಹೀಗೆ ವಿವಿಧ ಕಾರಣದಿಂದ ಕೆಲ ಪ್ರಕರಣಗಳು ಬಗೆಹರಿದಿಲ್ಲ
ಪ್ರವಾಸಿ ತಾಣ, ಸಾಂಸ್ಕೃತಿಕ ನಗರಿ ಎಂಬ ಹಿರಿಮೆಯಿಂದಲೇ ಮೈಸೂರು ನಗರದಲ್ಲಿ ಭಿಕ್ಷಾಟನೆ ಹೆಚ್ಚಾಗುತ್ತಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಾರ್ಥನಾ ಮಂದಿರ ಸೇರಿದಂತೆ ಇನ್ನಿತರ ಸಾರ್ವಜನಿಕರ ಸ್ಥಳಗಳಲ್ಲಿ ಭಿಕ್ಷಾಟನೆ ಗೋಚರವಾಗುತ್ತದೆ. ಇದನ್ನು ತಡೆಯಲು ವಿವಿಧ ಕ್ರಮ ತೆಗೆದುಕೊಂಡರೂ, ಇದಕ್ಕೆ ಕಡಿವಾಣ ಬಿದ್ದಿಲ್ಲ. ಪಾಲಕರೇ ಈ ದಂಧೆಗೆ ಮಕ್ಕಳು ನೂಕುತ್ತಿದ್ದಾರೆ.
ಬನ್ನಿಮಂಟಪದ ವ್ಯಾಪ್ತಿಯ ಯಲ್ಲಮ್ಮ ಕಾಲನಿ ಬಳಿ ಇರುವ ಸ್ಲಂ ಪ್ರದೇಶವೇ ಭಿಕ್ಷುಕ ಮಕ್ಕಳ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇಲ್ಲಿಂದ ಬರುವ ಮಕ್ಕಳೇ ನಗರದ ವಿವಿಧೆಡೆ ಭಿಕ್ಷೆಗಾಗಿ ಅಲೆಯುತ್ತಿದ್ದಾರೆ. ಹಗಲು ಹೊತ್ತು ಶಾಲೆಗೆ ಹೋಗುವ ಇಲ್ಲಿಯ ಮಕ್ಕಳು, ಸಂಜೆ ನಂತರ ಈ ಭಿಕ್ಷೆಗೆ ಇಳಿಯುತ್ತಾರೆ. ಭಿಕ್ಷೆಯಿಂದಲೇ ನಿತ್ಯ 1,000ರಿಂದ 1,500 ರೂ. ಹಣ ಸಂಗ್ರಹಿಸುತ್ತಿದ್ದಾರೆ. ಇವರ ಪಾಲಕರು ಇದನ್ನೇ ನಂಬಿಕೊಂಡು ಜೀವನ ಸಾಗುತ್ತಿದ್ದಾರೆ.
ಕೆಲ ಸಂದರ್ಭದಲ್ಲಿ ಬೆಳಗ್ಗೆ 6ಕ್ಕೆ ಮಕ್ಕಳು ಭಿಕ್ಷೆ ಬೀಡುವುದರ ಕುರಿತು ದೂರುಗಳು ಬಂದಿವೆ. ಹಸಿವು, ಊಟ, ತಿಂಡಿ ಕೊಡಿಸಿ.. ಹೀಗೆ ನಾನಾ ನೆಪ ಹೇಳಿ ಸಾರ್ವಜನಿಕರ ಎದುರು ಹಣಕ್ಕಾಗಿ ಕೈಚಾಚುತ್ತಿದ್ದಾರೆ. ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಮಾಡುವ ಪ್ರತಿ ಶುಕ್ರವಾರ ದಿನದಂದು ಮಸೀದಿಗಳು, ಕೆಲ ದಿನಗಳಲ್ಲಿ ದೇವಸ್ಥಾನಗಳು, ಚರ್ಚ್‌ಗಳ ಗುರಿಯಾಗಿಸಿಕೊಂಡು ಅಲ್ಲಿಯೇ ಜಮಾವಣೆಗೊಳ್ಳುತ್ತಾರೆ.
ಈ ಕೃತ್ಯ ಕಾನೂನುಬಾಹಿರ. ಮಕ್ಕಳನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ ) ಕಾಯ್ದೆ-2015 ಕಲಂ 76 ರ ಪ್ರಕಾರ ಯಾವುದೇ ವ್ಯಕ್ತಿಗಳು ಮಕ್ಕಳನ್ನು ಭಿಕ್ಷಾಟನೆಗೆ ದೂಡಿದರೆ ಗರಿಷ್ಠ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.
ಕಾಯ್ದೆ-ಕಾನೂನಿನ ತಿಳಿವಳಿಕೆ ಕೊರತೆಯಿಂದ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. ಪಾಲಕರು, ಕೆಲಸಕ್ಕೆ ಇಟ್ಟುಕೊಳ್ಳುವ ವ್ಯಕ್ತಿಗಳಿಗೆ ಅರಿವು ಮೂಡಿಸಿದರೂ ಇದು ಪುನರಾವರ್ತನೆಯಾಗುತ್ತಿದೆ. ಎರಡು ವರ್ಷದಲ್ಲಿ 104 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 61 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅಸಮರ್ಪಕ ಮಾಹಿತಿ ಕಾರಣಕ್ಕೆ ಕೆಲ ಪ್ರಕರಣಗಳನ್ನು ಕೈಬಿಡಲಾಗಿದೆ. ಮಕ್ಕಳನ್ನು ಕೆಲಸಕ್ಕೆ ಬಳಕೆ ಮಾಡಿಕೊಂಡರೆ ಮೊದಲ ಬಾರಿಗೆ 10 ಸಾವಿರ ರೂ.ದಂಡ ಹಾಕಬಹುದು. ಇದು ಮರುಕಳಿಸಿದರೆ 6 ತಿಂಗಳು ಜೈಲು ಶಿಕ್ಷೆ ಕೊಡಿಸಲು ಸಹ ಅವಕಾಶ ಇದೆ.
ಭಿಕ್ಷಾಟನೆ, ಬಾಲಕಾರ್ಮಿಕರ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಮಕ್ಕಳನ್ನು ದೂಡುವ ಪಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಜೈಲಿಗೆ ಕಳುಹಿಸಬಹುದು. ಹೀಗೆ ಮಾಡಿದರೆ ಮತ್ತೆ ಮಕ್ಕಳಿಗೆ ತೊಂದರೆಯಾಗುತ್ತದೆ.
ಅವರು ಅನಾಥರಾಗಿ, ರಕ್ಷಣೆ, ಪೋಷಣೆ ಇಲ್ಲದೆ ಇನ್ನೊಂದು ರೀತಿ ಸಂಕಷ್ಟಕ್ಕೆ ಸಿಲುಕಿಕೊಂಡು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಇಂತಹ ಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ತಿಳಿವಳಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗುತ್ತದೆ. ಇದರ ದುರ್ಲಭ ಪಡೆದು ಪಾಲಕರು ಮತ್ತೆ ಅದೇ ದಂಧೆಗೆ ಮಕ್ಕಳನ್ನು ಇಳಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದುವೇ ತಲೆನೋವಾಗಿದೆ.
ಮೈಸೂರು ಜಿಲ್ಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣೆಗಾಗಿ ಪ್ರತಿ ತಿಂಗಳು ಕಾರ್ಯಚರಣೆ ಕೈಗೊಂಡು ಮಕ್ಕಳನ್ನು ರಕ್ಷಣೆ ಮಾಡಲಾಗುತ್ತಿದೆ. ಅವರನ್ನು ಶಾಲೆಗೆ ಮತ್ತೆ ದಾಖಲಿಸಲಾಗುತ್ತಿದೆ. ಎನ್.ಟಿ.ಯೋಗೇಶ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಂದರೆ ಕಂಡರೆ ಸಾರ್ವಜನಿಕರು ಭಿಕ್ಷೆ ನೀಡುವ ಬದಲು ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ-1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಆ ಮಕ್ಕಳ ಭವಿಷ್ಯ ಬದಲಾಗುತ್ತದೆ. ಅವರಿಗೆ ಶಿಕ್ಷಣ, ರಕ್ಷಣೆ, ಪೋಷಣೆ, ಆರ್ಥಿಕ ಸಹಾಯವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡುವ ಮೂಲಕ ಅಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುತ್ತದೆ. ಎ.ಎಸ್. ರಘು ಜಿಲ್ಲಾ ಯೋಜನಾ ಸಂಯೋಜಕ ಮಕ್ಕಳ ಸಹಾಯವಾಣಿ ಘಟಕ