ಮೈಸೂರಿನಲ್ಲಿ 2.14 ಕೋಟಿ ರೂ. ವಂಚನೆ

crime 5
Published on

ಮೈಸೂರು: ಸಾರ್ವಜನಿಕರಿಂದ ಬರೋಬ್ಬರಿ 2.14 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಆರೋಪದಡಿ ನಾಲ್ವರ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಿಮಾಲಯ ಕಾಮೋಡಿಟೀಸ್, ಗುಡ್‌ವಿಲ್ ವೆಲ್ತ್ ಮ್ಯಾನೇಜ್‌ಮೆಂಟ್, ಗುಡ್‌ವಿಲ್ ಕಾಂ ಟ್ರೇಡ್ಸ್ ಎಂಬ ಹೆಸರಿನ ಕಂಪನಿಗಳ ಮೂಲಕ ಮೋಸ ಮಾಡಿದ್ದು, ಈ ಸಂಬಂಧ ದಟ್ಟಗಳ್ಳಿಯ ಸೋಮನಾಥನಗರದ ಜಿ.ಎನ್.ಕೃಷ್ಣಮೂರ್ತಿ, ಈತನ ಪತ್ನಿ ಡಯಾನ, ಇತರ ಆರೋಪಿಗಳಾದ ಲಕ್ಷ್ಮೀಶ ಹಾಗೂ ರಘುಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಜನರನ್ನು ನಂಬಿಸಲಾಗಿದೆ. 2014ರಿಂದ 2021ರವರೆಗೆ 2,14,84,500 ರೂ. ಪಡೆದು, ಲಾಭಾಂಶವನ್ನೂ ನೀಡಿಲ್ಲ. ಹೂಡಿಕೆ ಹಣವನ್ನು ವಾಪಸ್ ನೀಡದೆ ಹೂಡಿಕೆದಾರರಿಗೆ ಮೋಸ ಮಾಡಲಾಗಿದೆ.


ಪ್ರಕರಣದ ತನಿಖಾ ವೇಳೆ ಆರೋಪಿ ಜಿ.ಎನ್.ಕೃಷ್ಣಮೂರ್ತಿ ಬಂಧಿಸಿ ವಿಚಾರಣೆ ಮಾಡಲಾಗಿದೆ. ಈತನ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಆರೋಪಿಗಳು ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ವಿವಿಧ ಸ್ಥಳಗಳಲ್ಲಿ ತೆರೆದಿದ್ದಾರೆ. ಈ ಕಂಪನಿಗಳ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಆದ್ದರಿಂದ ಈ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಸಾರ್ವಜನಿಕರು ಅವಶ್ಯಕ ದಾಖಲಾತಿಗಳೊಂದಿಗೆ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net