

ಮೈಸೂರು: ಪ್ರತಿಷ್ಠಿತ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಈ ಸಲ ಜ.14ರಿಂದ ಆರು ದಿನಗಳ ಕಾಲ ರಂಗಾಯಣದಲ್ಲಿ ನಡೆಯಲಿದೆ.
ರಂಗಾಯಣದ ವತಿಯಿಂದ ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ರಂಗ ಉತ್ಸವದಲ್ಲಿ ದೇಶದ ಬೇರೆ ಪ್ರದೇಶಗಳ, ಬೇರೆ ಭಾಷೆಗಳ ಮಹತ್ವದ ನಾಟಕ, ಕನ್ನಡದ ಸಮಕಾಲೀನ ಸ್ಪಂದನೆಯ ನಾಟಕ, ಕನ್ನಡದ ಸೋದರ ಭಾಷೆಯ ನಾಟಕಗಳೂ ಪ್ರದರ್ಶನಗೊಳ್ಳಲಿವೆ.
ಈ ಬಾರಿ ‘ಬಿಡುಗಡೆ; ಸಾಮಾಜಿಕ ನ್ಯಾಯ-ಚಳವಳಿಗಳು ಮತ್ತು ರಂಗಭೂಮಿ’ ಆಶಯದ ಶೀರ್ಷಿಕೆಯೊಂದಿಗೆ ರಂಗೋತ್ಸವ ಆಯೋಜಿಸಲಾಗುತ್ತಿದೆ.
ಬಿ.ವಿ.ಕಾರಂತ ರಂಗ ವೇದಿಕೆಯಲ್ಲಿ ಮಂಗಳವಾರ ‘ಬಹುರೂಪಿ’ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ರಂಗಾಯಣದ ನಿರ್ದೇಶನ ಸತೀಶ್ ತಿಪಟೂರು ಅವರು, ಈ ಸಲ 22 ನಾಟಕಗಳು ಪ್ರದರ್ಶನಗೊಳ್ಳಲಿವೆ.
ತೆಲಂಗಾಣ, ಪುದುಚೇರಿ, ಮಧ್ಯಪ್ರದೇಶ, ಕೇರಳ, ಅಸ್ಸಾಂ ರಾಜ್ಯಗಳ 7 ನಾಟಕಗಳು, ಕನ್ನಡದ 13, ಇಂಗ್ಲಿಷ್ ಭಾಷೆಯ 2 ನಾಟಕಗಳು ಪ್ರಸ್ತುತಗೊಳ್ಳಲಿವೆ. ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರಗಳು ನಾಟಕಗಳ ಪ್ರದರ್ಶನಕ್ಕೆ ವೇದಿಕೆಯಾಗಲಿವೆ ಎಂದು ತಿಳಿಸಿದರು.
ಜ.14ರಂದು ಸಂಜೆ 5.30ಕ್ಕೆ ಬಹುರೂಪಿ ನಾಟಕೋತ್ಸವವನ್ನು ರಂಗಕರ್ಮಿ, ಬಾಲಿವುಡ್ ನಟ ಅತುಲ್ ಕುಲಕರ್ಣಿ ಉದ್ಘಾಟಿಸುವರು. ಪ್ರತಿ ವರ್ಷದಂತೆ ಈ ಬಾರಿ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಜ.18ರಿಂದ ಆಯೋಜಿಸಲಾಗಿದೆ. ಕನ್ನಡ ಮತ್ತು ತಮಿಳು ರಂಗಭೂಮಿ ಕಲಾವಿದೆ ಎ.ರೇವತಿ ವಿಚಾರಸಂಕಿರಣವನ್ನು ಉದ್ಘಾಟಿಸುವರು. ನಾಡಿನ ಹೆಸರಾಂತ ವಿದ್ವಾಂಸರು ತಮ್ಮ ವಿಚಾರ ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಲ ಮೊದಲ ಬಾರಿಗೆ ‘ಮಕ್ಕಳ ಬಹುರೂಪಿ’ ಏರ್ಪಡಿಸಲಾಗಿದೆ. ಕಲಾಮಂದಿರದಲ್ಲಿ 15ರಂದು ಸಂಜೆ 6ಕ್ಕೆ ಇದಕ್ಕೆ ಬಹುಭಾಷಾ ನಟ ಪ್ರಕಾಶ ರೈ ಚಾಲನೆ ನೀಡುವರು. ಮಕ್ಕಳಿಗೆ ಸಂಬಂಧಿಸಿದ 6 ನಾಟಕ, 9 ಚಲನಚಿತ್ರಗಳು ಪ್ರದರ್ಶನವಾಗಲಿವೆ. ಶ್ರೀರಂಗ ರಂಗಮಂದಿರದಲ್ಲಿ ರಾಷ್ಟ್ರೀಯ ಚಲನಚಿತ್ರೋತ್ಸವ ಏರ್ಪಡಿಸಲಾಗಿದೆ. ಈ ಬಾರಿ ಯಕ್ಷಗಾನ ಪ್ರಸಂಗವೂ ಇರಲಿದೆ. ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಕಿಂದರಿಜೋಗಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿವೆ ಎಂದರು.
ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ, ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಚಿತ್ರಕಲೆಗಳು, ಕಲಾಮಂದಿರದ ಸುಚಿತ್ರ ಕಲಾಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನ ಇರಲಿದೆ ಎಂದರು.
ನಾಟಕದ ಟಿಕೆಟ್ ದರ 100 ರೂ. ನಿಗದಿಪಡಿಸಲಾಗಿದೆ. ‘ಮಕ್ಕಳ ಬಹುರೂಪಿ’ಯಲ್ಲಿ ಮಕ್ಕಳಿಗೆ 50 ರೂ. ಟಿಕೆಟ್ ಇರಲಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಇದ್ದರು.