

ಮೈಸೂರು: ನಗರದಲ್ಲಿ ಇರುವ ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತುಸಂಗ್ರಹಾಲಯ ಮಾಡುವ ಸಂಬಂಧ ಮುಖ್ಯಮಂತ್ರಿ ಅವರ ಜತೆ ಚರ್ಚಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಈಗ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದ್ದು, ಪಾರಂಪರಿಕವಾಗಿರುವ ಹಳೆಯ ಕಟ್ಟಡವನ್ನು ವಸ್ತುಸಂಗ್ರಹಾಲಯ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಅರಮನೆ ಆವರಣದಲ್ಲಿರುವ ಪಾರಂಪರಿಕ ಹಾಗೂ ಪುರಾತತ್ವ ಭದ್ರತಾ ಕೊಠಡಿಯಲ್ಲಿ ನಟರಾಜ ವಿಗ್ರಹ, ವಿವಿಧ ಕಲಾಕೃತಿಗಳು, ತಾಮ್ರದ ಓಲೆ, ನಾಣ್ಯಗಳು ಸೇರಿದಂತೆ ಅಮೂಲ್ಯವಾದ 369 ವಸ್ತುಗಳಿವೆ ಎಂದರು.
12 ವರ್ಷಗಳ ಬಳಿಕ ಈ ಭದ್ರತಾ ಕೊಠಡಿ ತೆರೆಯಲಾಗಿದ್ದು, ಇಲ್ಲಿರುವ ಕಲಾಕೃತಿಗಳನ್ನು ಸಂರಕ್ಷಣೆ ಮಾಡಬೇಕು. ಜತೆಗೆ ಅಧ್ಯಯನ, ವೀಕ್ಷಣೆಗೂ ಅವಕಾಶ ಮಾಡಿಕೊಡಬೇಕಿದೆ. ಆ ಮೂಲಕ ನಮ್ಮ ಸಂಸ್ಕೃತಿ, ಇತಿಹಾಸ ತಿಳಿಯಲು ಸಹಾಯವಾಗಲಿದೆ ಎಂದು ಹೇಳಿದರು.