ಮೈಸೂರಿನ ಮಹಾಜನ ಕಾಲೇಜಿನಲ್ಲಿ 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Mahajana college
Published on

ಮೈಸೂರು: ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಸ್ನಾತಕ ವಿಭಾಗದ 488 ಹಾಗೂ ಸ್ನಾತಕೋತ್ತರ ವಿಭಾಗದ 349 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸ್ನಾತಕ ವಿಭಾಗದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ ಹಾಗೂ ಬಿಬಿಎ (ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ) ಕೋರ್ಸ್‌ಗಳ ಒಟ್ಟು 488 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ‌್ಯಾಂಕ್ ವಿಜೇತ 37 ವಿದ್ಯಾರ್ಥಿಗಳಿಗೆ ಪದಕದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪೂಜಾ ಭಾಗವತ್ ಸ್ಮಾರಕ ಸ್ನಾತಕೋತ್ತರ ಪದವಿ ವಿಭಾಗದ ಎಂಬಿಎ, ಎಂಸಿಎ, ಎಂಕಾಂ, ಎಂಎಸ್‌ಡಬ್ಲುೃ, ಎಂಎಸ್ಸಿ ಕೆಮಿಸ್ಟಿ, ಎಂಎಸ್ಸಿ ಬಯೋಕೆಮಿಸ್ಟ್ರಿ, ಎಂಎಸ್ಸಿ ಬಯೋಟೆಕ್ನಾಲಜಿ, ಎಂಎಸ್ಸಿ ಮೈಕ್ರೋಬಯಾಲಜಿ, ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಹಾಗೂ ಎಂಟಿಟಿಎಂ ಕೋರ್ಸ್‌ಗಳಲ್ಲಿ ಒಟ್ಟು 349 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ‌್ಯಾಂಕ್ ವಿಜೇತ 23 ವಿದ್ಯಾರ್ಥಿ ಗಳಿಗೆ ಪದಕದೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗದ ನಿಕಟಪೂರ್ವ ಅಧ್ಯಕ್ಷ ಪ್ರೊ. ವೇದ್‌ಪ್ರಕಾಶ್ ಪದವಿ ಪ್ರದಾನಮಾಡಿ ಮಾತನಾಡಿ, ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿರಿಸುತ್ತಿದ್ದೀರಿ. ಸ್ಪರ್ಧಾತ್ಮಕ ಜಗತ್ತು ಒಡ್ಡುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿದರು.

ವಿದ್ಯಾಭ್ಯಾಸ ಪೂರ್ಣಗೊಂಡ ಮಾತ್ರಕ್ಕೆ ನಮ್ಮ ಕಲಿಕೆ ಪೂರ್ಣಗೊಳ್ಳುವುದಿಲ್ಲ. ಜೀವನಪೂರ್ತಿ ನಾವು ಹೊಸ ಪಾಠಗಳನ್ನು ಕಲಿಯುತ್ತಾ ಹೋಗುತ್ತೇವೆ. ಬದಲಾಗುತ್ತಿರುವ ಪ್ರಪಂಚಕ್ಕೆ ಪೂರಕವಾಗಿ ನಾವು ಹೊಸತನ್ನು ಕಲಿತಾಗ ಮಾತ್ರ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಸಾಧನೆಗೆ ಶಾರ್ಟ್‌ಕಟ್ ಎಂಬುದು ಇಲ್ಲ, ಶಿಸ್ತು, ಶ್ರದ್ಧೆ ಹಾಗೂ ಪರಿಶ್ರಮದ ಮೂಲಕವೇ ಸಾಧನೆಯ ಶಿಖರ ಏರಬೇಕು. ಉತ್ತಮ ಸಾಧನೆ ತೋರಲು ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀವು ಏನನ್ನಾದರು ಕಲಿಯಬೇಕಾದರೆ ಮೊದಲು ಆಲಿಸುವುದನ್ನು ಕಲಿಯಿರಿ. ವೈವಿಧ್ಯಮಯ ಆಲೋಚನೆಗಳಿಗೆ ಕಿವಿಗೊಡಿ. ಎಲ್ಲರನ್ನೂ ಗೌರವಿಸುವುದನ್ನು ಕಲಿಯಿರಿ. ನೀವು ಯಾವುದೇ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಿ, ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉನ್ನತವಾದ ಸಾಧನೆ ತೋರುವ ಗುರಿ ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಸಣ್ಣ ಗುರಿಗಳನ್ನು ಯಾವತ್ತೂ ಹೊಂದಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಹಾಜನ ವಿದ್ಯಾಸಂಸ್ಥೆಯು ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಸಣ್ಣದಾಗಿ ಪ್ರಾರಂಭವಾದ ಈ ವಿದ್ಯಾಸಂಸ್ಥೆ ಇಂದು ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಮಾರ್ಗದರ್ಶನ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಈ ಹಿಂದೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದರೆ ಸುಲಭವಾಗಿ ಕೆಲಸ ದೊರೆಯುತಿತ್ತು. ಆದರೆ, ಇದೀಗ ಪ್ರತಿಯೊಂದು ಕ್ಷೇತ್ರಗಳಲ್ಲೂ ಸ್ಪರ್ಧೆ ಎದುರಾಗಿದ್ದು, ಸ್ಪರ್ಧೆ ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಬೇಕು. ಇದಕ್ಕೆ ಪರಿಶ್ರಮ ಹಾಗೂ ಪ್ರಾಮಾಣಿಕತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ತಜ್ಞರ ಪ್ರಕಾರ ಜನಸಂಖ್ಯೆ ಹೆಚ್ಚಳ ದೇಶಕ್ಕೆ ಹೊರೆಯೇನು ಅಲ್ಲ. ಇಲ್ಲಿನ ಮಾನವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಾರ್ಯ ಆಗಬೇಕಷ್ಟೆ. ಈ ನಿಟ್ಟಿನಲ್ಲಿ ದೇಶದ ಜನರಲ್ಲಿ ಕೌಶಲ್ಯ ವೃದ್ಧಿಸುವ ಕಾರ್ಯಗಳು ಆಗಬೇಕಾಗಿದೆ. ಕೌಶಲ್ಯ ಪಡೆಯುವ ವ್ಯಕ್ತಿ ದೇಶದ ಆಸ್ತಿಯಾಗುತ್ತಾನೆ ಎಂದು ಅಭಿಪ್ರಾಯಪಟ್ಟರು.

ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಸೋಲು-ಗೆಲುವುಗಳು ಸಹಜ. ಜೀವನದುದ್ದಕೂ ಗೆಲುವೇ ಇರುವುದಿಲ್ಲ. ಸೋಲು ಎದುರಾದಾಗ ಸೋಲನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಬೆಳೆಸಿಕೊಳ್ಳ ಬೇಕು. ಒಂದು ಬಾರಿ ನಿಮಗೆ ಗೆಲುವು ದೊರೆತರೆ ನಂತರ ಹಲವು ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸಲು ನೀವು ಸಜ್ಜಾಗಬೇಕು. ಸವಾಲನ್ನು ಸಮರ್ಥವಾಗಿ ಎದುರಿಸಿದರೆ ಯಶಸ್ಸು ದೊರೆಯುತ್ತದೆ ಎಂದರು.

ನೀವು ಯಾವುದೇ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ, ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಿಮ್ಮದೇ ಹಾದಿಯಲ್ಲಿ ನೀವು ಸಾಗಬೇಕು. ಯಾವುದೇ ಕಾರಣಕ್ಕೂ ಮತ್ತೊಬ್ಬರನ್ನು ಅನುಕರಣೆ ಮಾಡಬಾರದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿ ಜೀವನ ಮುಕ್ತಾಯಗೊಂಡ ನಂತರ ಸಹಪಾಠಿಗಳನ್ನು ಮರೆಯಬೇಡಿ. ಆಗಿಂದಾಗೆ ಭೇಟಿಯಾಗಿ ಕುಶಲೋಪರಿ ಹಂಚಿಕೊಳ್ಳಿ. ಅದೇ ರೀತಿ ವಯಸ್ಸಾದ ಪಾಲಕರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ಪ್ರಾಚಾರ್ಯರಾದ ಡಾ.ಬಿ.ಆರ್. ಜಯಕುಮಾರಿ, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮಿಮುರಳೀಧರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಆರ್. ಮಂಜುನಾಥ, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ್, ಎಂಬಿಎ ವಿಭಾಗದ ಮುಖ್ಯಸ್ಥ ಹರೀಶ್ ಮಾಚಯ್ಯ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net