ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ

Yaduveer-1
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Published on

 ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆ ಸಮೀಪ ಫ್ಲೈಓವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಈ ಫ್ಲೈಓವರ್ ನಿರ್ಮಾಣದೊಂದಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆ ಮತ್ತು ರೈಲ್ವೆ ಸೇತುವೆಗಳ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ 711 ಕೋಟಿ ರೂ.ಮೊತ್ತದ ಪ್ಯಾಕೇಜ್‌ಗೆ ಒಪ್ಪಿಗೆ ಕೊಟ್ಟಿದೆ. ಪ್ರಸ್ತಕ ಆರ್ಥಿಕ ವರ್ಷದಲ್ಲೇ ಅನುದಾನ ಬಿಡುಗಡೆಯಾಗಲಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. 6 ತಿಂಗಳ ಒಳಗೆ ಕೆಲಸ ಶುರುವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಣಿಪಾಲ್ ಆಸ್ಪತ್ರೆ ಬಳಿಯ ವೃತ್ತದಲ್ಲಿ ವಾಹನಗಳ ದಟ್ಟಣೆಯಿದೆ. ವಾಹನ ಸವಾರರಿಗೆ ಅನನುಕೂಲವಾಗುತ್ತಿದೆ. ಫ್ಲೈಓವರ್ ನಿರ್ಮಾಣಕ್ಕೆ ನಾಗರಿಕರಿಂದಲೂ ಒತ್ತಾಯವಿದೆ. ಇದಕ್ಕೆ ಸ್ಪಂದಿಸಿ ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಮಂಡ್ಯದ ಗಣಂಗೂರು ಮತ್ತು ರಾಮನಗರದ ಎರಡು ಟೋಲ್‌ಗಳಿವೆ. ಇನ್ನೂ ಪ್ರವೇಶ ಮತ್ತು ನಿರ್ಗಮನದ ಕಡೆ 28 ಟೋಲ್ ಬರಲಿದೆ. ಆಗ ಹೆದ್ದಾರಿಯಲ್ಲಿ ಸಂಚರಿಸಿದ ಕಿಲೋ ಮೀಟರ್‌ಗಳಿಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಹೆದ್ದಾರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಉತ್ತಮವಾದ ಮೂಲಸೌಕರ್ಯ ಒದಗಿಸಲಾಗುವುದು. ಟೋಲ್ ಸಂಗ್ರಹ ವೇಳೆ ಸ್ಥಳೀಯರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

711 ಕೋಟಿ ರೂ.ಪ್ಯಾಕೇಜ್‌ನಲ್ಲಿ ಬಿಡದಿ, ಚನ್ನಪಟ್ಟಣ ಮತ್ತು ಮಂಡ್ಯ ರೈಲ್ವೆ ಮೇಲುತ್ಸುವೆ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ರೈಲು ಗಾಡಿಗಳ ಸುಗಮ ಪ್ರಯಾಣ ಮತ್ತು ಹಳ್ಳಿಗಳ ಜನರು ತಡೆ ರಹಿತ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದರು.

ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ, ರನ್ ವೇ ವಿಸ್ತರಣೆ ಮತ್ತು ವಿಮಾನಗಳ ಹಾರಾಟ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರ ಪ್ರಯತ್ನಿಸಲಾಗುತ್ತಿದೆ. ರನ್‌ವೇ ವಿಸ್ತರಣೆಗೆ ಶೇ.80ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಇನ್ನೂ 46 ಎಕರೆ ಮಾತ್ರ ಬಾಕಿ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಭೂಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಉಡಾನ್ ಯೋಜನೆಯಡಿ ಮೈಸೂರಿಗೆ ಹೆಚ್ಚಿನ ವಿಮಾನಗಳ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಎರಡ್ಮೂರು ಏರ್‌ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿದ್ಯುತ್ ತಂತಿಯನ್ನು ಭೂಮಿ ಒಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಅಳವಡಿಸಬೇಕು ಎಂಬುದರ ಕುರಿತು ಕೆಪಿಟಿಸಿಎಲ್ ಸಮೀಕ್ಷೆ ನಡೆಸಬೇಕಿದೆ. ಮೈಸೂರು-ನಂಜನಗೂಡು ಹೆದ್ದಾರಿ ಬದಲಾವಣೆ, ರೈಲ್ವೆ ಹಳಿಯನ್ನು ಅಂಡರ್ ಪಾಸ್‌ಗೆ ಬದಲಿಸುವ ಸಂಬಂಧ ರೈಲ್ವೆ ಇಲಾಖೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಉತ್ತರಿಸಿದರು.

ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಸಂಬಂಧ ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗುವುದು. ಈ ಹಿಂದೆ ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಈ ಬಗ್ಗೆ ಪ್ರಧಾನಿ ಅವರೊಂದಿಗೆ ಮಾತನಾಡಲಾಗುವುದು ಎಂದರು.

ದೆಹಲಿಯಲ್ಲಿ ರೈತರ ಮೇಲೆ ಅಶ್ರುವಾಯು ಸಿಡಿಸಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಿಸಾನ್ ಸಮ್ಮಾನ್ ಸೇರಿದಂತೆ ಅನೇಕ ಯೋಜನೆ ತಂದಿದ್ದಾರೆ. ರೈತರ ಬೇಡಿಕೆಗಳು ಪ್ರಾಮಾಣಿಕವಾಗಿದ್ದರೆ ಈಡೇರಿಸಲಾಗುತ್ತದೆ ಎಂದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇದ್ದರು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಸಂಸದ ಯದುವೀರ್ ಆಗ್ರಹಿಸಿದರು.

ಈ ಬಗ್ಗೆ ಹೈಕೋರ್ಟ್ ಕೂಡ ಆದೇಶ ನೀಡಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಕೂಡ ಕೇರಳ ಸರ್ಕಾರದ ಮಾತಿಗೆ ಮನ್ನಣೆ ನೀಡದೇ ಅವಕಾಶ ನೀಡಿರಲಿಲ್ಲ. ಜತೆಗೆ, ಸಿದ್ದರಾಮಯ್ಯ ಅವರು ಕೂಡ ಈ ಹಿಂದೆ ಸಿಎಂ ಆಗಿದ್ದಾಗ ವಿರೋಧ ಮಾಡಿದ್ದರು. ಈಗ ಏಕೆ ಪರವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net