

ಮೈಸೂರು: ಮತದಾರರಲ್ಲಿ ಚುನಾವಣಾ ಅರಿವು ಮೂಡಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ನಗರದಲ್ಲಿ ವಿಂಟೇಜ್ ಕಾರ್ ರ‌್ಯಾಲಿ ಶನಿವಾರ ನಗರದಲ್ಲಿ ನಡೆಯಿತು.
ಪುರಭವನದಿಂದ ಹೊರಟ ಹಳೇ ಕಾರುಗಳು ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆಯ ಮೂಲಕ ಸಾಗುವ ಮೂಲಕ ಮತಜಾಗೃತಿ ಮೂಡಿಸಿದವು. ಹಾದಿಹೋಕರು ಹಳೇ ಕಾರಿನ ಸೌಂದರ್ಯಕ್ಕೆ ಮಾರುಹೋದರು.
ಪುರಾತನ ಕಾರುಗಳೊಂದಿಗೆ ಪಾರಂಪರಿಕ ನಗರಿಯ ಹಿರಿಮೆಯಾದ ಟಾಂಗಾ ಗಾಡಿಗಳು ಭಾಗಿಯಾಗುವ ಮೂಲಕ ರ‌್ಯಾಲಿಗೆ ಮೆರುಗು ತಂದುಕೊಟ್ಟವು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, 70 ರಿಂದ 75 ವರ್ಷಗಳ ಇತಿಹಾಸವಿರುವ ಈ ಚುನಾವಣೆ ಮತ್ತು ವಿಂಟೇಜ್ ಕಾರನ್ನು ಹೋಲಿಕೆ ಮಾಡಿದರೆ ಪ್ರತಿವರ್ಷವೂ ಅದರ ಮಹತ್ವ ಹಾಗೂ ಛಾಪು ಹೆಚ್ಚಾಗುತ್ತಲೇ ಇದೆ ಎಂದರು.
ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು. ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ, ಪ್ರತಿಬಾರಿಯೂ ಚುನಾವಣಾ ಹಬ್ಬದ ಮೆರುಗನ್ನು ಹೆಚ್ಚಿಸಲು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಮತದಾರ ಸಹ ಈ ದೇಶದ ಹಾಗೂ ಪ್ರಜಾಪ್ರಭುತ್ವದ ಆಸ್ತಿ. ಮತದಾರರು ಯಾವುದೇ ರೀತಿಯ ಚುನಾವಣಾ ಅಕ್ರಮವನ್ನು ಮಾಡದೆ ನೈತಿಕ ಮತದಾನವನ್ನು ಮಾಡಬೇಕು. ಜತೆಗೆ, ಬೇರೆಯವರಿಗೂ ನೈತಿಕ ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದರು.
ಕಳೆದ 2018ರ ಚುನಾವಣೆಯಲ್ಲಿ ಮೈಸೂರಿನಲ್ಲಿ ಶೇ.70ರಷ್ಟು ಮತದಾನವಾಗಿದ್ದು, ಈ ಬಾರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ ನಗರ ಪ್ರದೇಶದ ಮತದಾರರು ಹಾಗೂ ಯುವಜನರನ್ನು ಸೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಷ್ಟೋ ಜನರು ಅಕ್ಷರಸ್ಥರಾಗಿದ್ದರೂ ಮತದಾನದ ವಿಷಯದಲ್ಲಿ ಪ್ರಜ್ಞಾವಂತರಾಗಿರುವುದಿಲ್ಲ. ಅಂತಹವರಿಗೂ ಸಹ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಸ್ವೀಪ್ ಸಮಿತಿಯಿಂದ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಕಡ್ಡಾಯವಾಗಿ ಮತ ಹಾಕಬೇಕು ಎಂದರು.
ಜಿಲ್ಲಾ ಪಂಚಾಯಿತಿಯ ಸಿಇಒ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎನ್.ಎನ್.ಮಧು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.