

ಮೈಸೂರು: ಎರಡು ದಿನಗಳ ಮೈಸೂರು ಪ್ರವಾಸವನ್ನು ಮುಗಿಸಿಕೊಂಡು ಮಂಗಳವಾರ ಹೊರಟ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ರಾಷ್ಟ್ರಪತಿ ಅವರು ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಸೋಮವಾರ ಮಧ್ಯಾಹ್ನ ಆಗಮಿಸಿದ್ದರು. ಸಂಜೆ ನಡೆದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಹೋಟೆಲ್‌ನ ದರ್ಬಾರ್ ಕೊಠಡಿಯನ್ನು ಅವರಿಗೆ ನೀಡಲಾಗಿತ್ತು.
ಮಂಗಳವಾರ ಬೆಳಗ್ಗೆ ಮೈಸೂರು ಅರಮನೆಗೆ ಭೇಟಿ ನೀಡಿ ಅಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಭಾಗಿಯಾಗಿದ್ದರು. ನಂತರ ಅಲ್ಲಿಯಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ರಾಜ್ಯ ಸರ್ಕಾರದಿಂದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಶಿಷ್ಟಾಚಾರದಂತೆ ರಾಷ್ಟ್ರಪತಿಗೆ ಬೀಳ್ಕೊಡುಗೆ ನೀಡಿದರು. ಮೈಸೂರು ಪ್ರವಾಸದ ನೆನಪುಗಳನ್ನು ಹೊತ್ತುಕೊಂಡು ಮುರ್ಮು ಅವರು, ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದರು.
ಮೈಸೂರು ಪ್ರಾಂತ್ಯದ ನೆಚ್ಚಿನ ಆಹಾರವಾದ ರಾಗಿ ಮುದ್ದೆ, ಉಪ್ಸಾರು ಊಟವನ್ನು ದ್ರೌಪದಿ ಮುರ್ಮು ಅವರು ಸೋಮವಾರ ರಾತ್ರಿ ಸವಿದರು. ವಾಸ್ತವ್ಯ ಹೂಡಿದ್ದ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಅವರಿಗೆ ಮೈಸೂರಿನ ಪಾರಂಪರಿಕ ಊಟವನ್ನು ಉಣಬಡಿಸಲಾಯಿತು.
ಆತ್ಮೀಯವಾಗಿ ಸ್ವೀಕರಿಸಿ ರಾಗಿಮುದ್ದೆ ಊಟದ ರುಚಿ ಸವಿದು ಮೆಚ್ಚಿಕೊಂಡಿದ್ದಾರೆ. ದಕ್ಷಿಣ ಭಾರತೀಯ ಆಹಾರವನ್ನೂ ತಯಾರಿಸಲಾಗಿತ್ತು. ಅವರ ಇಷ್ಟದಂತೆ ಸ್ಥಳೀಯ ತಿಂಡಿಯನ್ನು ಸಿದ್ಧ ಪಡಿಸಲಾಗಿತ್ತು. ಇವುಗಳ ರುಚಿಯನ್ನು ನೋಡಿ ಆನಂದಪಟ್ಟರು ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.