

ಮೈಸೂರು: ಶಿಥಿಲಾವಸ್ಥೆ ತಲುಪಿರುವ ಪಾರಂಪರಿಕ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳೆರಡನ್ನೂ ಸಂಪೂರ್ಣವಾಗಿ ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವರಾಜ ಮಾರುಕಟ್ಟೆಯಲ್ಲಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಹೊಸದಾಗಿ ಕಟ್ಟಡ ಕಟ್ಟಿ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವ್ಯಾಪಾರಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದರು.
ಹೊಸ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಡಲಾಗಿದೆ. ಶೀಘ್ರವೇ ನಿರ್ಮಾಣ ಕೆಲಸ ಶುರುವಾಗಲಿದೆ. ನಿಗದಿತ ಸಮಯದ ಒಳಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಮೈಸೂರು ನಗರದಲ್ಲಿ 50 ಕಿಲೋಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುತ್ತದೆ. ಈ ಬಗ್ಗೆ ಸಮಗ್ರ ವಿಸ್ತೃತ ಯೋಜನಾ ವರದಿಯನ್ನು ಶೀಘ್ರವೇ ತಯಾರಿಸಲಾಗುವುದು ಎಂದು ಹೇಳಿದರು.
750 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ(ಯುಜಿಡಿ) ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.